ನ್ಯೂಸ್ ನಾಟೌಟ್: ಕಾಂತಾರ ಕನ್ನಡ ಸಿನಿಮಾ ವಿಶ್ವದಾದ್ಯಂತ ಭಾರಿ ಸದ್ದು ಮಾಡಿ ದಾಖಲೆ ಸೃಷ್ಠಿಸಿದೆ. ಕಾಂತಾರ ಸಿನಿಮಾದ ನಂತರ ದೈವ ನರ್ತಕರಿಗೆ ಮಾಸಿಕ ಎರಡು ಸಾವಿರ ರೂಪಾಯಿ ಮಾಸಾಶನ ದೊರೆತಿದೆ. ಇದೀಗ ಕಾಡು ಜನರ ಬದುಕನ್ನು ಹಸನು ಮಾಡಲು ರಿಷಭ್ ಶೆಟ್ಟಿ ಮುಂದಾಗಿದ್ದಾರೆ.
ಕಾಡು ಜನರಿಂದ ಸ್ಪೂರ್ತಿ ಪಡೆದುಕೊಂಡ ರಿಷಬ್ ಅವರು ಅವರ ಜೀವನ ಶೈಲಿಯ ಕಷ್ಟಗಳ ಆಲಿಸಿದ್ದಾರೆ. ಅಷ್ಟೇ ಏಕೆ ಈ ಸಂಬಂಧ 20 ಅಂಶಗಳನ್ನು ಪಟ್ಟಿ ಮಾಡಿ ಪತ್ರದಲ್ಲಿ ಬರೆದ ರಿಷಭ್ ಶೆಟ್ಟಿ ಈ ಪತ್ರವನ್ನು ಸಿಎಂ ಬಸವರಾಜ ಬೊಮ್ಮಾಯಿಗೆ ನೀಡಿದ್ದು ಕಾಡು ಮಕ್ಕಳ ಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ ಹಾಗೂ ಈ ಸಂಬಂಧ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ, ‘ಕಾಂತಾರ ಸಿನಿಮಾದ ಬಳಿಕ ನಾನು ಹೆಚ್ಚೆಚ್ಚು ಕಾಡು ಮತ್ತು ಕಾಡಂಚಿನ ಪ್ರದೇಶಗಳಲ್ಲಿ ಸುತ್ತಾಡಿದೆ. ಅರಣ್ಯ ಇಲಾಖೆಯ ಜೊತೆ ಕೆಲಸ ಮಾಡುತ್ತಾ ಅರಣ್ಯ ರಕ್ಷಣೆಯ ವೇಳೆ ಇಲಾಖೆಯ ಮಂದಿ ಮತ್ತು ಕಾಡಂಚಿನ ಪ್ರದೇಶಗಳ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅರಿತುಕೊಂಡೆ.
ಉದಾಹರಣೆಗೆ ಕೃಷಿಕರು ಎದುರಿಸುತ್ತಿರುವ ಕಾಡಾನೆ ತೊಂದರೆ ಸಮಸ್ಯೆ ಇರಬಹುದು, ಕಾಡ್ಗಿಚ್ಚು ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಾಚರ್ ಗಳು ಎದುರಿಸುವ ಕಷ್ಟಗಳಿರಬಹುದು ಹೀಗೆ ಸುಮಾರು 20 ಅಂಶಗಳ ವಿವರವಾದ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, ಅವರು ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.