ನ್ಯೂಸ್ನಾಟೌಟ್: ಕಡಬ ತಾಲೂಕಿನ ನೈಲದಲ್ಲಿ ಕಾಡಾನೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಆಕ್ರೋಶಿತ ಜನರ ನಡುವೆ ಉಂಟಾದ ಘರ್ಷಣೆಯಿಂದ ಇಲಾಖೆ ವಾಹನಗಳಿಗೆ ಹಾನಿ, ಕರ್ತವ್ಯಕ್ಕೆ ಅಡ್ಡಿ, ಕೊಲೆ ಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟ 7 ಮಂದಿಗೆ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಮೇಶ್ ಕಮರ್ಕಜೆ, ರಾಜೇಶ್ ಕನಡ ಕಮರ್ಕಜೆ, ಜನಾರ್ದನ ರೈ ಕೊಲ್ಯ, ಕೋಕಿಲ ಕಮರ್ಕಜೆ, ತೀರ್ಥಕುಮಾರ ಕೋಲ್ಪೆ, ಗಂಗಾಧರ ಗೌಡ ಬಾರ್ಯ ಸಿರಿಬಾಗಿಲು ಮತ್ತು ಅಜಿತ್ಕುಮಾರ್ ಕೆಂಜಾಳ ಎಂಬವರನ್ನು ಕಡಬ ಪೊಲೀಸರು ಬಂಧಿಸಿದ್ದರು. ಆರೋಪಿಗಳು ಬಿಡುಗಡೆಗೆ ಕೋರಿ ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆರೋಪಿಗಳ ಪರ ವಕೀಲ ಮಹೇಶ್ ಕಜೆ ವಾದಿಸಿದ್ದು, ಅವರ ವಾದ ಪುರಸ್ಕರಿಸಿದ ಜಿಲ್ಲಾ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಬಂಧಿತ ಆರೋಪಿಗಳಿಗೆ ಜಾಮೀನು ನೀಡಿ ಆದೇಶಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಆರೋಪಿಗಳಾದ ಯೋಗೀಶ್ ಯಾನೆ ಯಶೋಧರ, ಉಮೇಶ್ ಯು., ಭರತ್ ಯಾನೆ ಭರತೇಶ್ ಬಿ., ಹಾಗೂ ಸತ್ಯಪ್ರಿಯ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಆರೋಪಿಗಳಿಗೂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿದೆ. ಆರೋಪಿಗಳ ಪರ ಸುಳ್ಯದ ವಕೀಲರಾದ ಎಂ. ವೆಂಕಪ್ಪ ಗೌಡ, ಚಂಪಾ ವಿ. ಗೌಡ ಹಾಗೂ ರಾಜೇಶ್ ಬಿ.ಜಿ. ವಾದ ಮಂಡಿಸಿದ್ದರು.
ಫೆ. 23ರಂದು ರಾತ್ರಿ ಕೊಂಬಾರು ಗ್ರಾಮದ ಮಂಡೆಕರ ಸಮೀಪದ ಮೂಜೂರು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಮೂಲಕ ಸೆರೆ ಹಿಡಿಯಲಾದ ಒಂದು ಆನೆಯನ್ನು ರಾತ್ರಿ ವೇಳೆ ದುಬಾರೆ ಆನೆ ಶಿಬಿರ ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿರುವಾಗ ಆಕ್ರೋಶಿತ ಸ್ಥಳೀಯರ ಗುಂಪು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದಿತ್ತು. ಪುಂಡಾಟ ನಡೆಸುತ್ತಿರುವ ಉಳಿದ ಆನೆಗಳನ್ನೂ ಸೆರೆ ಹಿಡಿದ ಬಳಿಕವೇ ಎಲ್ಲಾ ಆನೆಗಳನ್ನು ಸ್ಥಳಾಂತರಿಸಿ ಎಂದು ಒತ್ತಾಯಿಸಿದರು. ಬಳಿಕ ಪೊಲೀಸರು ಬಂದು ಸ್ಥಳೀಯರ ಮನವೊಲಿಸಿದರೂ ಆಕ್ರೋಶಿತ ಜನರು ತಮ್ಮ ಪಟ್ಟು ಸಡಿಲಿಸಲಿಲ್ಲ. ಇದರಿಂದ ಘರ್ಷಣೆ ಉಂಟಾಗಿ ಆಕ್ರೋಶಿತ ಜನರು ಅರಣ್ಯ ಇಲಾಖೆ ವಾಹನ, ಪೊಲೀಸ್ ವಾಹನಕ್ಕೆ ಕಲ್ಲು ತೂರಾಟ ನಡೆಸಿದ್ದರು. ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಉಪ ವಲಯ ಅರಣ್ಯ ಅಧಿಕಾರಿ ಮದನ್ ಬಿ.ಕೆ. ಕಡಬ ಠಾಣೆ ದೂರು ನೀಡಿದ್ದರು. ಅದರಂತೆ ಏಳು ಮಂದಿಯ ಬಂಧನವಾಗಿತ್ತು. ಇದೀಗ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.