ನ್ಯೂಸ್ ನಾಟೌಟ್: ಮನೆಯಲ್ಲಿ ಚಾರ್ಜಿಂಗ್ ಮಾಡಲು ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಪೋಟಗೊಂಡ ಘಟನೆ ಮದ್ದೂರು ತಾಲೂಕಿನ ವಳೆಗೆರೆಹಳ್ಳಿಯಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಮುತ್ತುರಾಜ್ ಎಂಬುವವರ ಮನೆಯಲ್ಲಿ ಪ್ರತಿನಿತ್ಯ ಸ್ಕೂಟರ್ ಅನ್ನು ಚಾರ್ಜಿಗೆ ಹಾಕುವಂತೆ ನಿನ್ನೆಯೂ ಕೂಡ ಎಲೆಕ್ಟ್ರಿಕ್ ಬ್ಯಾಟರಿಚಾಲಿತ ಸ್ಕೂಟರ್ ಅನ್ನು ಚಾರ್ಜ್ಗೆ ಹಾಕಲಾಗಿತ್ತು. ಆದರೆ, ರಾತ್ರಿವೇಳೆ ಚಾರ್ಜ್ ಹಾಕಿದ್ದ ಸ್ಕೂಟರ್ ಕೆಲವೇ ಗಂಟೆಗಳಲ್ಲಿ ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ.
ಬೈಕ್ ಸ್ಪೋಟಗೊಂಡ ಸಂದರ್ಭದಲ್ಲಿ ಮನೆಯೊಳಗೆ ಕುಟುಂಬದ ಐವರು ಸದಸ್ಯರು ಇದ್ದರು. ಈ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಎಲ್ಲ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಮನೆಯಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಬ್ಯಾಟರಿಯ ಸ್ಕೂಟರ್ ಸ್ಪೋಟ ಆಗುತ್ತಿದ್ದಂತೆ, ಮನೆಯಲ್ಲಿನ ಎಲ್ಲ ವಿದ್ಯುತ್ ಸಂಪರ್ಕಿಸುವ ವೈರಿಂಗ್ ಸುಟ್ಟು ಹಾನಿಗೀಡಾಗಿದೆ ಎಂದು ತಿಳಿದು ಬಂದಿದೆ.ಇದರಿಂದ ಎಲೆಕ್ಟ್ರಿಕ್ ಸಾಧನಗಳಾದ ಟಿವಿ, ಫ್ರಿಡ್ಜ್, ಫ್ಯಾನ್ಗಳು ಹಾಗೂ ಬಲ್ಬ್ಗಳು ಸಂಪೂರ್ಣ ಹಾನಿಗೀಡಾಗಿವೆ. ಇನ್ನು ಸ್ಕೂಟರ್ ಪಕ್ಕದಲ್ಲಿಯೇ ಇದ್ದ ಡೈನಿಂಗ್ ಟೇಬಲ್ ಸೇರಿ ಅನೇಕ ಕಟ್ಟಿಗೆಯಿಂದ ಮಾಡಲಾದ ವಸ್ತುಗಳು ಕೂಡ ಸುಟ್ಟು ಕರಕಲಾಗಿವೆ. ಇನ್ನು ಮನೆಯಲ್ಲಿದ್ದ ಇತರೆ ವಸ್ತುಗಳು ಬೇರೆಡೆ ಇದ್ದುದರಿಂದ ದೊಡ್ಡ ಪ್ರಮಾಣದಲ್ಲಿ ಅನಾಹುತ ಆಗುವುದು ತಪ್ಪಿದಂತಾಗಿದೆ.
ಚಾರ್ಜಿಗೆ ಹಾಕಿದ್ದ ಸ್ಕೂಟರ್ ಸ್ಪೋಟಕ್ಕೆ ಇಡೀ ಬೀದಿಯಲ್ಲಿ ದೊಡ್ಡ ಪ್ರಮಾಣದ ಶಬ್ದ ಉಂಟಾಗಿದೆ.ಎಲ್ಲರೂ ಬಂದು ನೋಡುವಷ್ಟರಲ್ಲಿ ಮುತ್ತುರಾಜ್ ಅವರ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ.ಕೂಡಲೇ ಮನೆಯವರು ಹಾಗೂ ಇತರೆ ನೆರೆಹೊರೆಯವರು ಸೇರಿಕೊಂಡು ಉರಿಯುತ್ತಿದ್ದ ಬೆಂಕಿಯನ್ನು ನೀರಿನ ಮೂಲಕ ನಂದಿಸಿದ್ದಾರೆ. ನಂತರ, ಮನೆಗೆ ಸಂಪರ್ಕ ಮಾಡಲಾಗಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇನ್ನು ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಗ್ಯಾಸ್ ಹಾಗೂ ಇತರೆ ಬೆಂಕಿಯ ಜ್ವಾಲೆ ಹೆಚ್ಚಾಗುವಂತಹ ವಸ್ತುಗಳನ್ನು ಮನೆಯಿಂದ ಹೊರಗೆ ತರಲಾಗಿತ್ತು.ಇಂಧನ ಉಳಿತಾಯ ಹಾಗೂ ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ಬ್ಯಾಟರಿ ಚಾಲಿತ ಬೈಕ್ ಮತ್ತು ಸ್ಕೂಟರ್ ಗಳನ್ನು ಬಳಸಲು ಜನರು ಮುಂದಾಗಿದ್ದಾರೆ. ಈ ಬಗ್ಗೆ ಸರ್ಕಾರ ಕೂಡ ಪರಿಶೀಲನೆ ಮಾಡಿದ್ದು, ಎಲೆಕ್ಟ್ರಿಕ್ ಚಾರ್ಜಿಂಗ್ ಬ್ಯಾಟರಿ ಚಾಲಿತ ವಾಹನಗಳಿಗೆ ಪ್ರೋತ್ಸಾಹಧನ ಕೂಡ ನೀಡುತ್ತಿದೆ. ಆದರೆ, ಈಗ ಚಾರ್ಜಿಗೆ ಹಾಕಿದ್ದ ಸ್ಕೂಟರ್ ಸ್ಪೋಟಗೊಂಡಿದ್ದು, ಮಂಡ್ಯ ಸೇರಿ ಸುತ್ತಲಿನ ಹಳ್ಳಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.