ನ್ಯೂಸ್ ನಾಟೌಟ್: ಪೆರಾಜೆ ಗ್ರಾಮದಲ್ಲಿ ಇಂದಿನಿಂದ ಸಂಭ್ರಮ,ಸಡಗರ. ಮಡಿಕೇರಿ ತಾಲೂಕಿನ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಇಂದಿನಿಂದ ಮಾ.5ರವರೆಗೆ ಮೂರು ದಿನಗಳ ಕಾಲ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ನಡೆಯಲಿದೆ. ಊರಿಗೆ ಊರೇ ಬಣ್ಣ ಬಣ್ಣಗಳ ಅಲಂಕಾರದಿಂದ ರಾರಾಜಿಸುತ್ತಿದೆ.
ಹಲವು ವರ್ಷಗಳ ಬಳಿಕ ನಡೆಯುವ ಮಹೋತ್ಸವಕ್ಕೆ ಅದ್ದೂರಿ ಸಿದ್ಧತೆ ನಡೆದಿದ್ದು, ತಳಿರು ತೋರಣ, ಬ್ಯಾನರ್, ಬಂಟಿಂಗ್ಸ್, ವರ್ಣಮಯ ಲೈಟಿಂಗ್ಸ್ ಗಳಿಂದ ಮಧುಮಗಳಂತೆ ಶೃಂಗಾರಗೊಂಡಿದೆ. ಸುಳ್ಯದಿಂದಲೇ ಅಲ್ಲಲ್ಲಿ ಸ್ವಾಗತ ಕಮಾನುಗಳು, ದ್ವಾರಗಳು ಸಿದ್ಧವಾಗಿದ್ದು ಭಕ್ತರನ್ನು ಸ್ವಾಗತಿಸುತ್ತಿದೆ.
3 ದಿನಗಳ ದೈವಕಟ್ಟು ಮಹೋತ್ಸವಕ್ಕೆ ಊರ- ಪರವೂರ ಭಕ್ತಾದಿಗಳು ಆಗಮಿಸಲಿದ್ದಾರೆ.ವಾಹನಗಳಿಗೆ ಪಾರ್ಕಿಂಗ್ಗೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ.ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ. ಈ ಉತ್ಸವದ ಸಂದರ್ಭದಲ್ಲಿ ಬೆಳಗ್ಗೆ ಉಪಹಾರ, ಹಾಗೂ, ಮಧ್ಯಾಹ್ನ, ರಾತ್ರಿ ಅನ್ನದಾನ ಸೇವೆ ನಡೆಯುವುದು.ಮಹೋತ್ಸವದ ಯಶಸ್ವಿಗೆ ಊರಿನ ಜನರು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸಂಭ್ರಮ ವೀಕ್ಷಿಸಲು ಮತ್ತು ದೈವದ ಕೃಪೆಗೆ ಪಾತ್ರರಾಗಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ಇಂದು ಬೆಳಗ್ಗೆ ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆಯಿಂದ ಹಸಿರುವಾಣಿ ಮೆರವಣಿಗೆ ಹೊರಡುವುದು. ಉಗ್ರಾಣ ಮುಹೂರ್ತ (ಕಲವರ ನಿರಕ್ಕಲ್) ನಡೆಯುವುದು.ಬಳಿಕ ಧಾರ್ಮಿಕ ಸಭೆ ನಡೆಯಲಿದೆ. ಸಂಜೆಯಿಂದ ದೈವಿಕ ಕಾರ್ಯಕ್ರಮಗಳು ಆರಂಭಗೊಳ್ಳುವುದು. ರಾತ್ರಿ ಕೈವಿದ್, ದೈವಗಳ ಕೂಡುವಿಕೆ, ಶ್ರೀ ಪೊಟ್ಟನ್ ದೈವ ನಡೆಯುವುದು.
ಮಾ.4ರಂದು ಶನಿವಾರ ಬೆಳಗ್ಗೆಯಿಂದ ದೈವಗಳ ಮಹೋತ್ಸವ ನಡೆಯಲಿದ್ದು ಬೆಳಗ್ಗೆ 7ರಿಂದ ಕೊರತಿಯಮ್ಮ ದೈವ, ಚಾಮುಂಡಿ ದೈವ, ಬಳಿಕ ವಿಷ್ಣುಮೂರ್ತಿ ದೈವ, ಮಧ್ಯಾಹ್ನ ಗುಳಿಗ ದೈವದ ಕೋಲ, ಸಂಜೆ 3 ರಿಂದ ಕಾರ್ನೋನ್ ದೈವದ ವೆಳ್ಳಾಟ್ಟಂ, ಕೋರಚ್ಛನ್ ದೈವದ ವೆಳ್ಳಾಟ್ಟಂ, ರಾತ್ರಿ ಕಂಡನಾರ್ ಕೇಳನ್ ದೈವದ ವೆಳ್ಳಾಟ್ಟಂ, ವಿಷ್ಣುಮೂರ್ತಿ ದೈವದ ಆರಂಭ, ರಾತ್ರಿ 1ಗಂಟೆಗೆ ವಯನಾಟ್ ಕುಲವನ್ ದೈವದ ವೆಳ್ಳಾಟ್ಟಂ ನಡೆಯಲಿದೆ.
ಮಾ.5ರಂದು ಬೆಳಗ್ಗೆ 7ರಿಂದ ಕಾರ್ನೊನ್ ದೈವ, 9 ರಿಂದ ಕೊರಚ್ಛನ್ ದೈವ, 11 ರಿಂದ
ಕಂಡನಾರ್ ಕೇಳನ್ ದೈವ, ಅಪರಾಹ್ನ 2 ರಿಂದ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ, ಅಪರಾಹ್ನ 3 ರಿಂದ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ, ರಾತ್ರಿ ಮರ ಪಿಳರ್ಕಲ್, ನಂತರ ಕೈವೀದ್ ನಡೆಯಲಿದೆ.ಮೂರು ದಿನಗಳ ಕಾಲ ನಿರಂತರ ಅನ್ನದಾನ ನಡೆಯಲಿದೆ.