ನ್ಯೂಸ್ ನಾಟೌಟ್: ಬಸ್ಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಸ್ ಆಕಸ್ಮಿಕವಾಗಿ ಹೊತ್ತಿ ಉರಿದು ಗಾಢ ನಿದ್ರೆಯಲ್ಲಿ ಮಲಗಿದ್ದ ನಿರ್ವಾಹಕನ ಸಜೀವ ದಹನವಾದ ಘೋರ ಘಟನೆ ಮಾರ್ಚ್ ೧೦ರ ಮುಂಜಾನೆ ಬೆಂಗಳೂರಿನ ಲಿಂಗಧೀರನಹಳ್ಳಿ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಅದೃಷ್ಟವಶಾತ್ ಈ ದುರಂತದಲ್ಲಿ ಬಸ್ಸ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಬಿಎಂಟಿಸಿ ಬಸ್ಸ್ನಲ್ಲಿ ಕೆಲಸಮಾಡುತ್ತಿದ್ದ ಚಾಲಕ ಪ್ರಕಾಶ್ ಮತ್ತು ನಿರ್ವಾಹಕ ಮುತ್ತಯ್ಯ ಸ್ವಾಮಿ ಎಂದಿನಂತೆ ಕರ್ತವ್ಯ ಮುಗಿಸಿ ಬಸ್ಸ್ ಡಿಪೋದಲ್ಲಿಟ್ಟು ಊಟ ಮುಗಿಸಿಕೊಂಡು ಬಂದಿದ್ದ ಸಿಬ್ಬಂದಿಗಳು ಬಸ್ಸ್ನಲ್ಲೇ ನಿದ್ದೆಗೆ ಜಾರಿದರು. ನುಸುಕಿನ ಜಾವ ಚಾಲಕ ಪ್ರಕಾಶ್ ಶೌಚಾಲಯಕ್ಕೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬಸ್ಸ್ಗೆ ಬೆಂಕಿ ಹೊತ್ತಿಕೊಂಡು, ಗಾಢ ನಿದ್ರೆಯಲ್ಲಿದ್ದ ನಿರ್ವಾಹಕ ಬೆಂಕಿಯ ಕಿನ್ನಾರಿಗೆಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ ಎಮದು ವರದಿ ತಿಳಿಸಿದೆ.
ಮೃತ ನಿರ್ವಾಹಕ ಮುತ್ತಯ್ಯ ಸ್ವಾಮಿ(45) ಮೂಲತಃ ಗದಗ ಜಿಲ್ಲೆಯ ಹಾಲೂರಿನ ನಿವಾಸಿ ಎಂದು ಗುರುತಿಸಲಾಗಿದೆ.
ಚಾಲಕ ಬರುವಷ್ಟರಲ್ಲಿ ಬಸ್ಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಅಗ್ನಿಶಾಮಕ ಸಿಬ್ಬಂದಿಗಳ ನೆರವಿನಿಂದ ಬೆಂಕಿ ನಂದಿಸಲಾಗಿತ್ತು. ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸಾವಿಗೆ ಚಾಲಕ-ನಿರ್ವಾಹಕರ ಸಂಘ ಮತ್ತು ಬಿಎಂಟಿಸಿ ಆಡಳಿತ ಮಂಡಳಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.