ನ್ಯೂಸ್ ನಾಟೌಟ್: ಸುಳ್ಯ ವಿಧಾನಕ್ಷೇತ್ರದಿಂದ ಬಿಜೆಪಿಯಿಂದ ಆರು ಬಾರಿ ಗೆದ್ದಿರುವ ಎಸ್. ಅಂಗಾರ ಅವರು ಏಳನೇ ಬಾರಿ ಸ್ಪರ್ಧಿಸುವುದಕ್ಕೆ ಪಕ್ಷದೊಳಗೆಯೇ ಅಪಸ್ವರ ಎದ್ದಿದೆ !.
ಈ ಬಗ್ಗೆ ಬಿಜೆಪಿಯಲ್ಲಿನ ಬಣವೊಂದು ನಿನ್ನೆ ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಗುಪ್ತವಾಗಿ ಸಭೆ ನಡೆಸಿ ಈ ಬಾರಿ ಅಂಗಾರ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಬಾರದು ಎಂದು ಹೈಕಮಾಂಡ್ಗೆ ಮನವರಿಕೆ ಮಾಡಲು ಸಭೆಯಲ್ಲಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ 19 ಗ್ರಾಮಗಳ 50ಕ್ಕಿಂತ ಹೆಚ್ಚು ಪ್ರಮುಖರು ಸೇರಿದ್ದು, ಈ ಹಿಂದೆ ಗ್ರಾ.ಪಂ.ಚುನಾವಣೆಯ ವೇಳೆ ಸ್ವಾಭಿಮಾನಿಗಳಾಗಿ ಸ್ಪರ್ಧಿಸಿದ್ದ ಬಿ.ಜೆ.ಪಿ. ಪ್ರಮುಖರು ಮುಂಚೂಣಿಯಲ್ಲಿದ್ದರು ಎಂದು ತಿಳಿದುಬಂದಿದೆ.
ಎಸ್. ಅಂಗಾರ ಅವರು ಪಕ್ಷದ ಕಾರ್ಯಕರ್ತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅಲ್ಲದೇ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಈ ವಿಚಾರದಲ್ಲಿ ಹಿನ್ನಡೆಯಾಗಿದ್ದು, ಇದಕ್ಕೆ ಪಕ್ಷದೊಳಗೆಯೇ ಅಸಮಾಧಾನ ವ್ಯಕ್ತವಾಗಿದೆ. ಅಂಗಾರ ಅವರು ಈಗಾಗಲೇ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ ಇದೀಗ ಸಚಿವರಾಗಿದ್ದಾರೆ. ಮುಂದಿನ ಅವಕಾಶವನ್ನು ಹೊಸ ಮುಖಗಳಿಗೆ ನೀಡಬೇಕು ಎಂಬ ಅಭಿಪ್ರಾಯ ಗುಪ್ತ ಸಭೆಯಲ್ಲಿ ಚರ್ಚೆಯಾಗಿದೆ ಎಂದು ತಿಳಿದು ಬಂದಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಚಿವ ಅಂಗಾರ ಅವರನ್ನು ಮತ್ತೆ ಅಭ್ಯರ್ಥಿಯಾಗಿಸಲು ನಿರ್ಧರಿಸಲಾಗಿದೆ ಎಂದು ಮಾಧ್ಯಮದಲ್ಲಿ ವರದಿ ಪ್ರಕಟವಾಗಿತ್ತು. ಇದೀಗ ಬಿಜೆಪಿಯೊಳಗಿನ ಬಣ ಅಂಗಾರರಿಗೆ ಅವಕಾಶ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ತುರ್ತು ಸಭೆ ನಡೆಸಿ ಹೈಕಮಾಂಡ್ಗೆ ಮೊರೆ ಹೋಗಲು ತೀರ್ಮಾನಿಸಿದೆ. ಇದು ಯಾವ ರೀತಿಯ ತಿರುವು ಪಡೆಯುವ ಸಾಧ್ಯತೆಯಿದು ಎಂದು ಕಾದು ನೋಡಬೇಕಾಗಿದೆ.