ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಕೋಮು ಸೂಕ್ಷ್ಮ ಪ್ರದೇಶ ಎಂಬ ಕುಖ್ಯಾತಿಯನ್ನು ಪಡೆದಿರುವ ಜಿಲ್ಲೆ. ಆದರೆ ಬಂಟ್ವಾಳದ 800 ವರ್ಷದ ಹಿಂದಿನ ಮಸೀದಿ ಸಾಮರಸ್ಯದ ಹೊಸ ಅಧ್ಯಾಯ ಬರೆದಿದೆ. ಬಂಟ್ವಾಳ ತಾಲೂಕಿನ ಮೂಲರಪಟ್ಣದ ಮೊಹಿಯದ್ದೀನ್ ಜುಮಾ ಮಸ್ಜಿದ್ ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆಯ ಕೇಂದ್ರವಾಗಿ ಬದಲಾಗಿದೆ.
ಊರವರ ಸಹಕಾರದಿಂದ ಸುಂದರ ಮಸೀದಿ ನಿರ್ಮಾಣವಾಗಿದ್ದು, ಮಸೀದಿ ನಿರ್ಮಾಣಕ್ಕೆ ಮರ ಮಟ್ಟುಗಳನ್ನು ಕೂಡ ಹಿಂದೂಗಳು ನೀಡಿದ್ದಾರೆ ಎನ್ನುವುದು ವಿಶೇಷ. ಹಿಂದೂ ಬಡಗಿ ರತ್ನಾಕರ್ ಕೆತ್ತನೆಯಲ್ಲಿ ಮಸೀದಿ ಆಕರ್ಷಕವಾಗಿ ಮೂಡಿ ಬಂದಿದೆ. ಮೂಲರಪಟ್ಣದ ಮೊಹಿಯದ್ದೀನ್ ಜುಮಾ ಮಸೀದಿಗೆ 800 ವರ್ಷಗಳ ಇತಿಹಾಸವಿದೆ.ಇದೀಗ ಈ ಮಸೀದಿ ಸೌಹಾರ್ದತೆಯ ಕೇಂದ್ರಬಿಂದುವಾಗಿದೆ.
ಮಸೀದಿಯನ್ನು ಇತ್ತೀಚೆಗೆ ನವೀಕರಿಸಲಾಗಿದ್ದು, ಮಸೀದಿ ನವೀಕರಣಕ್ಕೆ ಹಿಂದೂಗಳು ಮರ ನೀಡಿದರೆ ,ಬಡಗಿ ರತ್ನಾಕರ್ ಕೈಯಿಂದ ಮಸೀದಿ ಒಳಗೆ ಆಕರ್ಷಕ ಕೆತ್ತನೆ ಮೂಡಿ ಬಂದಿದೆ. ಮರದ ಕೆತ್ತನೆಯಲ್ಲಿ ನುರಿತರಾಗಿರುವ ರತ್ನಾಕರ್, ಮಸೀದಿಯ ಕೆತ್ತನೆ ಕೆಲಸ ಮಾಡಿದ್ದು ಇದೇ ಮೊದಲ ಬಾರಿಯಾಗಿದೆ. ಅಳುಕಿನಿಂದಲೇ ಕೆಲಸ ಆರಂಭಿಸಿದ ರತ್ನಾಕರ್ ಕೆತ್ತನೆ ಕೆಲಸಕ್ಕೆ ಈಗ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರತ್ನಾಕರ್ ಅವರ ಆಕರ್ಷಕ ಕೆತ್ತನೆ ಕೆಲಸಕ್ಕೆ ಮಸೀದಿ ಆಡಳಿತ ಮಂಡಳಿ ರತ್ನಾಕರ್ ಅವರಿಗೆ ಐಫೋನ್ ಮತ್ತು ವಾಚ್ ಗಿಫ್ಟ್ ನೀಡಿ ಕೃತಜ್ಞತೆ ಸಲ್ಲಿಸಿದೆ. ಮಸೀದಿ ಉದ್ಘಾಟನೆಯ ದಿನ ನೋಡ ಬನ್ನಿ ನಮ್ಮೂರ ಮಸೀದಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಹೀಗಾಗಿ ಮಸೀದಿಯ ಸುಂದರ ಕೆತ್ತನೆ ನೋಡಲು ಹಿಂದೂ, ಮುಸ್ಲಿ, ಕ್ರ್ರೈಸ್ತರೆನ್ನದೇ ಆಗಮಿಸಿದ್ದರು ಎಂದು ವರದಿ ತಿಳಿಸಿದೆ.