ನ್ಯೂಸ್ ನಾಟೌಟ್: ಕಳೆದ ವರ್ಷ ಜಲ ಪ್ರವಾಹದಿಂದ ತತ್ತರಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮದಲ್ಲಿ ಜನರ ಆಕ್ರೋಶ ನೆತ್ತಿಗೇರಿದೆ. ಇದೀಗ ಮಳೆಗಾಲ ಶುರುವಾಗಲು ಎರಡು ತಿಂಗಳು ಬಾಕಿ ಇದೆ ಎನ್ನುವಾಗಲೇ ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದೆ. ಜನ ಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಂಪಾಜೆ ಗ್ರಾಮ ಮತ್ತೊಮ್ಮೆ ಮುಳುಗುವ ಭೀತಿಗೆ ಸಿಲುಕಿದೆ. ಈ ಬಗ್ಗೆ ನ್ಯೂಸ್ ನಾಟೌಟ್ ವರದಿ ಮಾಡಿದ ಬೆನ್ನಲ್ಲೇ ಸಂಪಾಜೆ ಗ್ರಾಮದಲ್ಲಿ ಇದೀಗ ಜನ ಶಕ್ತಿಯ ಪ್ರದರ್ಶನವಾಗುತ್ತಿದೆ. ಗ್ರಾಮ ಪಂಚಾಯತ್ ನೇತೃತ್ವದಲ್ಲಿ ನೊಂದ ಜನರು, ಸಂತ್ರಸ್ತರು, ಅಂಗಡಿ ಮಾಲೀಕರು ಒಟ್ಟು ಸೇರಿ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ. ಇದನ್ನು ಸ್ವತಃ ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ತಿಳಿಸಿದ್ದಾರೆ.
ಕಳೆದ ಮಳೆಗಾಲದಲ್ಲಿ ನಮ್ಮ ಭಾಗದ ಜನರು ಅನುಭವಿಸಿದ ಕಷ್ಟ ಸಾಕು.ಇನ್ನು ಮುಂದಿನ ಮಳೆಗಾಲದಲ್ಲಿ ಇದಕ್ಕೆ ನಾವು ಆಸ್ಪದ ಕೊಡುವುದಿಲ್ಲ. ಸಂಪಾಜೆ ಭಾಗದ ಜನತೆ ಇವಿಷ್ಟು ಮಾತ್ರವಲ್ಲದೇ ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷ ನಿರಂತರ ಭೂಕಂಪನ ಸಂಭವಿಸಿ, ಭೂಕುಸಿತದಂತಹ ಸಮಸ್ಯೆಗಳು ಎದುರಾಗಿದೆ. ಅಡಿಕೆ ಕೊಳೆ ರೋಗ,ಚುಕ್ಕಿರೋಗದಂತಹ ಸಮಸ್ಯೆಗಳು ಈ ಭಾಗದ ಜನರನ್ನು ತಲ್ಲಣಗೊಳಿಸಿದೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು ಸಂಪಾಜೆ ಭಾಗದ ನದಿಗಳಲ್ಲಿ ಹೂಳು ತುಂಬಿ ವರ್ಷ ಪೂರ್ತಿ ಹರಿಯುವ ನದಿಗಳೆಲ್ಲ ನೀರೇ ಇಲ್ಲದೇ ಬತ್ತಿ ಹೋಗಿದೆ.ಈ ಬಗ್ಗೆ ಸರಕಾರಕ್ಕೆ,ಗಣಿ ಇಲಾಖೆಗೆ ನಿರಂತರ ಬೇಡಿಕೆ ಸಲ್ಲಿಸಿ ಯಾವುದೇ ಸ್ಪಂದನೆ ದೊರೆತಿಲ್ಲ . ಸಂಪಾಜೆ ಗ್ರಾಮಸ್ಥರು ಜೀವಭಯದಲ್ಲೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳವೂ ಜಾಸ್ತಿಯಿದ್ದು ವರ್ಷಪೂರ್ತಿ ರೈತರು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಇಲ್ಲಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿ, ಸಚಿವರುಗಳು, ರಾಜ್ಯ, ರಾಷ್ಟ್ರ ಮಟ್ಟದ ಅಧಿಕಾರಿಗಳು ಬಂದು ವೀಕ್ಷಿಸಿ, ಸಮೀಕ್ಷೆ ನಡೆಸಿ ಹೋದರೂ ಏನೂ ಪ್ರಯೋಜನ ಆಗಿಲ್ಲ. ಭೂಕಂಪನ,ಜಲ ಪ್ರಳಯ, ಕೃಷಿ ನಷ್ಟ ಹೀಗೆ ಅನೇಕ ಸಮಸ್ಯೆಗಳಿಂದಾಗಿ ಹಲವು ಮಂದಿ ಕೃಷಿಕರಿಗೆ, ವರ್ತಕರಿಗೆ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ. ಆದರೆ ಸರಕಾರ ಯಾವುದೇ ಪರಿಹಾರವನ್ನೂ ಇದುವೆರೆಗೆ ನೀಡಿಲ್ಲ ಎಂದು ಜಿ.ಕೆ ಹಮೀದ್ ಅವರು ತಮ್ಮ ಅಸಮಾಧಾನ ಹೊರಹಾಕಿದರು.
ಕಳೆದ ವರ್ಷದ ಭೀಕರ ಮಳೆಯಿಂದಾಗಿ ಸಂಪಾಜೆ ಗ್ರಾಮದ ನದಿಗಳು ನೀರು ತುಂಬಿ ಹರಿದಿದ್ದು,ಅನೇಕ ಮನೆಗಳಿಗೆ,ಕೃಷಿ ಭೂಮಿಗಳಿಗೆ ನೀರು ನುಗ್ಗಿದೆ. ಜಲ ಪ್ರವಾಹದಿಂದಾಗಿ ಈ ಭಾಗದ ಜನತೆ ಇನ್ನೂ ಚೇತರಿಸಿಕೊಂಡಿಲ್ಲ. ನದಿಗಳಲ್ಲಿ ಹೂಳು ತುಂಬಿದಲ್ಲದೇ ಕೃಷಿ ಭೂಮಿಗಳಲ್ಲಿಯೂ ಮರಳು ತುಂಬಿದೆ. ಇದರಿಂದ ರೈತ ಕಂಗಾಲಾಗಿದ್ದಾನೆ. ಈ ವೇಳೆ ಗಣಿ ಇಲಾಖೆಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡುವ ಯತ್ನ ನಡೆಯಿತು. ಆದರೆ ಅವರು ಕಳೆದ ಕೆಲವು ದಿನಗಳಿಂದ ಸಂಪಾಜೆ ಗ್ರಾಮದ ಬಗ್ಗೆ ನಿರ್ಲಕ್ಷ್ಯ ವಹಿಸಿಕೊಂಡು ಬರುತ್ತಿದ್ದಾರೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಊರಿನ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಮಳೆಗಾಲ ಆರಂಭವಾಗಲು ಇನ್ನು ಎರಡು ತಿಂಗಳಷ್ಟೇ ಬಾಕಿ ಇದೆ. ಈ ಭಾಗದ ಜನರಿಗಾಗಿ ನಾವು ಹೋರಾಟ ಮಾಡಿಕೊಂಡೇ ಬಂದಿದ್ದೇವೆ.ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಸಂಪಾಜೆ ಗ್ರಾಮದ ನದಿಗಳಲ್ಲಿ ತುಂಬಿರುವ ಹೂಳನ್ನು ತೆಗೆಯದೇ ಇದ್ದರೆ , ನದಿ ಬದಿಯಲ್ಲಿ ಪೇಟೆಗೆ ಸುತ್ತ ತಡೆಗೋಡೆ ನಿರ್ಮಾಣ ಮಾಡದಿದ್ದರೆ ಮುಂದಿನ ಚುನಾವಣೆಯನ್ನು ನಾವು ಬಹಿಷ್ಕರಿಸುತ್ತೇವೆ. ಮಾತ್ರವಲ್ಲ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಈ ಬಗ್ಗೆ ಪ್ರಧಾನಿ ಕಚೇರಿಗೂ ದೂರು ನೀಡಲು ನಾವು ಸಿದ್ಧರಿದ್ದೇವೆ ಎಂದು ಸಂಪಾಜೆ ಗ್ರಾಮದ ರವಿಶಂಕರ್ ಭಟ್ ಹೇಳಿದರು.
ಕೊಡಗು ದುರಂತದಿಂದಲೂ ಸಂಪಾಜೆ ಭಾಗದ ಜನತೆ ತೊಂದರೆ ಅನುಭವಿಸಿದ್ದಾರೆ.ಇದೀಗ ಕಳೆದ ವರ್ಷದ ಮಳೆಗಾಲದ ಸಂದರ್ಭ ಸಂಪಾಜೆಯಲ್ಲಿ ಭೂಕಂಪ, ಜಲಪ್ರಳಯದಿಂದ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗಿತ್ತು. ಕೃಷಿಕರು, ವರ್ತಕರು, ಜನ ಸಾಮಾನ್ಯರು ದೊಡ್ಡ ನಷ್ಟವನ್ನು ಅನುಭವಿಸಿದ್ದು ಮಾತ್ರವಲ್ಲದೇ ಆತಂಕದಲ್ಲೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ವೀಕ್ಷಣೆಗಾಗಿ ರಾಜ್ಯದ ಮುಖ್ಯಮಂತ್ರಿ, ಸಚಿವರು ಬಂದಿದ್ದರು ಒಂದು ಪೈಸೆಯ ಪ್ರಯೋಜನ ಆಗಲಿಲ್ಲ. ಎಷ್ಟೋ ಜನ ಮನೆ, ಗೃಹಪಯೋಗಿ ವಸ್ತುಗಳು, ಕೃಷಿಬೆಳೆಗಳನ್ನು ಕಳೆದು ಕೊಂಡು ಬೀದಿಗೆ ಬಂದಿದ್ದರೂ ಕೂಡ ಯಾರಿಗೂ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ ಎಂದು ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದರು. ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ನದಿಯಲ್ಲಿರುವ ಹೂಳೆತ್ತಲು ಮತ್ತು ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಪದ್ಮಯ್ಯ ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ರೈ, ಅಬೂಸಾಲಿ ಗೂನಡ್ಕ, ಎಸ್.ಕೆ.ಹನೀಫ ಉಪಸ್ಥಿತರಿದ್ದರು.