ನ್ಯೂಸ್ ನಾಟೌಟ್: ಲೈಂಗಿಕ ಶೋಷಣೆಗೆ ಒಳಗಾದ 15 ವರ್ಷದ ಹದಿಹರೆಯದ ಬಾಲಕಿಯೊಬ್ಬಳು ಯು ಟ್ಯೂಬ್ ವಿಡಿಯೋ ನೋಡಿ ಮನೆಯಲ್ಲಿಯೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದು, ಬಳಿಕ ಶಿಶುವನ್ನು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಬಾಲಕಿ ಅಲ್ಲಿಯೇ ರಮೇಶ್ ಠಾಕೂರ್ ಎಂಬಾತನ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಪದೇ ಪದೇ ಭೇಟಿಯಾಗುತ್ತಿದ್ದರು. ಈ ಹದಿಹರೆಯದ ಯುವತಿ ಆತನಿಂದ ಲೈಂಗಿಕ ಶೋಷಣೆಗೆ ಒಳಗಾಗಿ ಕಾಲಕ್ರಮೇಣ ಗರ್ಭಿಣಿಯಾಗಿದ್ದಳು. ಆರೋಗ್ಯ ಸಮಸ್ಯೆ ಇರುವುದಾಗಿ ತನ್ನ ತಾಯಿಯೊಂದಿಗೆ ಪ್ರತಿ ಬಾರಿಯೂ ಈಕೆ ಸುಳ್ಳು ಹೇಳುತ್ತಿದ್ದಳು.
ಆ ಬಾಲಕಿ, ನಡೆದ ವಿಚಾರವನ್ನು ಮನೆಯವರಿಂದ ಮರೆ ಮಾಚಿದ್ದೇ ಒಂದು ವಿಚಿತ್ರ, ಇದೇ ರೀತಿ ರಹಸ್ಯ ಕಾಪಾಡಿದ್ದ ಮಹಾರಾಷ್ಟದ ಅಂಬಾಜಾರಿ ಏರಿಯಾದ ಯುವತಿಗೆ ಮನೆಯಲ್ಲಿಯೇ ಡೆಲಿವರಿ ಹೇಗೆ ಮಾಡಿಕೊಳ್ಳುವುದು ಎಂಬ ಐಡಿಯಾವನ್ನು ಯೂ ಟ್ಯೂಬ್ ವಿಡಿಯೋ ವೀಕ್ಷಿಸಿ ಮಾನಸಿಕವಾಗಿ ಅಭ್ಯಾಸ ಮಾಡಿಕೊಂಡಿದ್ದಳು, ಜೊತೆಗೆ ಬೇಕಾಗುವ ಪರಿಕರಗಳನ್ನು ರಹಸ್ಯವಾಗಿ ಸಂಗ್ರಹಿಸಿಟ್ಟುಕೊಂಡಿದ್ದಳು.
ಮಾರ್ಚ್ 2 ರಂದು, ಮನೆಯಲ್ಲಿಯೇ ಆಕೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದು, ಕೂಡಲೇ ಆ ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ವರದಿ ತಿಳಿಸಿದೆ. ಮನೆಯಲ್ಲಿ ಪೆಟ್ಟಿಗೆಯೊಂದರಲ್ಲಿ ಮಗುವಿನ ಶವ ಹಾಕಿದ್ದಳು ಎನ್ನಲಾಗಿದೆ.
ದುಡಿಮೆಗೆ ತೆರಳಿದ್ದ ತಾಯಿ ಮನೆಗೆ ಬಂದು ತನ್ನ ಪುತ್ರಿಯ ಆರೋಗ್ಯ ಪರಿಸ್ಥಿತಿ ಕಂಡು ವಿಚಾರಿಸಿದಾಗ ಎಲ್ಲಾ ವಿಷಯ ತಿಳಿದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೊಲೀಸರಿಗೆ ಮಾಹಿತಿ ನೀಡಿ, ಶಿಶುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಕಾನೂನು ದಂಡಸಂಹಿತೆ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಳಿಕ ಕೊಲೆ ಕೇಸ್ ದಾಖಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.