ನ್ಯೂಸ್ ನಾಟೌಟ್: ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳು ಫುಲ್ ಅಲರ್ಟ್ ಆಗಿವೆ. ಯಾರನ್ನು ಕಣಕ್ಕಿಳಿಸುವುದು ಅನ್ನುವ ದೀರ್ಫಾಲೋಚನೆಯಲ್ಲಿ ತೊಡಗಿಕೊಂಡಿವೆ. ಹೈಕಮಾಂಡ್ ಆದೇಶ, ಜಾತಿ ರಾಜಕೀಯ, ಹಣ ಬಲ ಎಲ್ಲವನ್ನುನೋಡಿಕೊಂಡು ಟಿಕೆಟ್ ಸಿಗುವ ನಿರೀಕ್ಷೆ ಇದ್ದು ಸುಳ್ಯ ಹಾಗೂ ಕೊಡಗು ಜಿಲ್ಲೆಯಲ್ಲೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಸೋಲಿಲ್ಲದ ಸರದಾರ ಎಸ್ ಅಂಗಾರ ಏಳನೇ ಬಾರಿಗೆ ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತಿದೆ. ಮತ್ತೊಂದು ಕಡೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಸಂಯೋಜಕ ನಂದ ಕುಮಾರ್ ಹೆಸರು ಕೂಡ ಕೇಳಿ ಬರುತ್ತಿದೆ.
ಸುಳ್ಯದ ಬಂಗಾರ ಖ್ಯಾತಿಯ ಸಚಿವ ಎಸ್.ಅಂಗಾರ ಸ್ಪರ್ಧಿಸುವುದಿಲ್ಲ ಎನ್ನುವ ಗಾಳಿ ಸುದ್ದಿಗಳು ಹರಿದಾಡಿದ್ದವು.ಈ ವಿಚಾರ ಚರ್ಚೆಯಲ್ಲಿರುವಾಗಲೇ ಅಂಗಾರ ಬದಲಿಗೆ ಬಿಜೆಪಿಯಿಂದ ಸುಳ್ಯದ ಐವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ ಅನ್ನುವ ವಿಚಾರವೂ ಹೊರಬಿದ್ದಿತ್ತು. ಸದ್ಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಎಸ್ಡಿಪಿಐ, ಆಪ್ ಅಭ್ಯರ್ಥಿಗಳು ಯಾರು ಎಂಬ ಬಗೆಗಿನ ಚರ್ಚೆಗಳು ಕೂಡ ನಡೆಯುತ್ತಿದೆ.
ಇತ್ತ ಬಿಜೆಪಿಯಿಂದ ಹಾಲಿ ಶಾಸಕ ಎಸ್.ಅಂಗಾರ ಅವರನ್ನೇ ಕಣಕ್ಕಿಳಿಸಲಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಅಭ್ಯರ್ಥಿ ಬದಲಾವಣೆ ಕುರಿತಂತೆ ರಾಜಕೀಯ ವಲಯದಲ್ಲಿ ಐವರ ಹೆಸರು ಕೇಳಿ ಬಂದಿತ್ತು.ಇದರಲ್ಲಿ ಪ್ರಮುಖ ಹೆಸರು ಭಾಗೀರಥಿ ಮುರುಳ್ಯ ಹಾಗೂ ಶಿವಪ್ರಸಾದ್ ಪೆರುವಾಜೆ, ಚನಿಯ ಕಲ್ತಡ್ಕ, ಶಂಕರ್ ಪೆರಾಜೆ, ಪದ್ಮಕುಮಾರ್ ಹೆಸರು ಕೇಳಿ ಬಂದಿದ್ದವು. ಆದರೆ ಈ ಬಾರಿಯೂ ಎಸ್.ಅಂಗಾರ ಅವರೇ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂಬುದು ಸದ್ಯ ಕೇಳಿ ಬಂದಿರುವ ಮಾಹಿತಿ.
ಕರಾವಳಿಗೆ ಹತ್ತಿರವಾಗಿರುವ ಕೊಡಗು ಜಿಲ್ಲೆಯಲ್ಲೂ ವಿವಿಧ ರಾಜಕೀಯ ಪಕ್ಷಗಳ ಟಿಕೆಟ್ ಫೈಟ್ ಜೋರಾಗಿದೆ. ಆಕಾಂಕ್ಷಿಗಳ ಪಟ್ಟಿಯೂ ಉದ್ದಕ್ಕೆ ಬೆಳೆದಿದ್ದು ಹೈ ಕಮಾಂಡ್ಗೆ ತಲೆ ನೋವಾಗುವ ಸಾಧ್ಯತೆ ಇದೆ. ಕೊಡಗು ಜಿಲ್ಲೆಯ ಮೂವರು ಅಭ್ಯರ್ಥಿಗಳು ಕ್ರಮವಾಗಿ ಈ ಬಾರಿ ಕಾಂಗ್ರೆಸ್ ಟಿಕೆಟ್ ಪಡೆಯುವುದು ಬಹುತೇಕ ಅಂತಿಮವಾಗಿದೆ ಎನ್ನಲಾಗಿದೆ. ಕಳೆದ ಚುನಾವಣೆಗಳಲ್ಲಿ ಸುಳ್ಯದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಡಾ.ರಘು ಬದಲಿಗೆ ಈ ಬಾರಿ ಕೊಡಗಿನ ನಂದ ಕುಮಾರ್ ಅವರು ಸುಳ್ಯದಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಕಾಂಗ್ರೆಸ್ನಿಂದ ನಂದ ಕುಮಾರ್ ಹಾಗೂ ಕೃಷ್ಣಪ್ಪ ಹೆಸರು ಕೇಳಿ ಬಂದಿದ್ದು ಇವರ ಪೈಕಿ ನಂದ ಕುಮಾರ್ ಅವರಿಗೆ ಟಿಕೇಟ್ ಸಿಗಲಿದೆ ಎನ್ನಲಾಗುತ್ತಿದೆ.ಇವರು ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷರಾಗಿದ್ದು, ಐದು ಬಾರಿ ನಗರಸಭೆಯ ಸದಸ್ಯರಾಗಿರುತ್ತಾರೆ. ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಳೆಸುವಲ್ಲಿ ಪಕ್ಷದ ನಾಯಕರೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಪ್ರಯತ್ನಿಸಿದ್ದಾರೆ. ನಂದಕುಮಾರ್ ಇಡೀ ಸುಳ್ಯ ಕ್ಷೇತ್ರದಲ್ಲಿ ಓಡಾಡಿ ಬಹಳಷ್ಟು ಗಮನ ಸೆಳೆದವರು.
ಮಡಿಕೇರಿ ಕ್ಷೇತ್ರಕ್ಕೆ ಕೊಡಗಿನಲ್ಲಿ ಅಭಿವೃದ್ಧಿ ಚಿಂತಕ ಎಂಬ ಹೆಸರಿನಿಂದ ಖ್ಯಾತಿ ಹೊಂದಿರುವ ಡಾ. ಮಂತರ್ ಗೌಡ ಹೆಸರು ಅಂತಿಮವಾಗಿದೆ ಎಂದು ಹೇಳಲಾಗಿದೆ. ಮಂತರ್ ಗೌಡ ತನ್ನ ಚಿಂತನೆಯಿಂದ ಕೊಡಗಿನ ಹೊರ ಪ್ರದೇಶದಲ್ಲೂ ತನ್ನ ಇಮೇಜ್ ಸೃಷ್ಟಿ ಮಾಡಿರುವುದು ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿದೆ. ಇನ್ನು ಕಾಂಗ್ರೆಸ್ ಕಾನೂನು ವಿಭಾಗದ ಮುಖ್ಯಸ್ಥರಾಗಿರುವ ವಕೀಲರಾದ ಎ.ಎಸ್ ಪೊನ್ನಣ್ಣ ಹೆಸರು ವಿರಾಜಪೇಟೆ ಕ್ಷೇತ್ರಕ್ಕೆ ಅಂತಿಮವಾಗಿದೆ ಎಂದು ಹೈಕಮಾಂಡ್ ಮೂಲಗಳಿಂದ ತಿಳಿದುಬಂದಿದೆ. ತನ್ನ ಟ್ರಸ್ಟಿನ ಮುಖಾಂತರ ಹಲವಾರು ಜನಪರ ಕಾರ್ಯಗಳನ್ನು ನಡೆಸಿರುವ ಪೊನ್ನಣ್ಣ ಅವರ ಹೆಸರು ಸರ್ವೆಯಲ್ಲೂ ಉತ್ತಮ ವಾಗಿ ಮೂಡಿ ಬಂದಿರುವ ಕಾರಣ ಈ ಹೆಸರು ಅಂತಿಮವಾಗಿದೆ ಎಂದು ಹೈಕಮಾಂಡ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.