ನ್ಯೂಸ್ನಾಟೌಟ್: ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ನಡೆಸಬೇಕು ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಸಿಪಿಎಂ ಮುಖಂಡ ಶೇಖರ ಲಾಯಿಲ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಸೋಮವಾರದಿಂದ ಏಕಾಂಗಿ ಪ್ರತಿಭಟನೆ ಆರಂಭಿಸಿದ್ದಾರೆ.
ಬೆಳಗ್ಗೆ 10ರಿಂದ ಸಾಯಂಕಾಲ 5.30ರವರೆಗೆ ಧರಣಿ ನಡೆಸಿದ ಅವರು, ಮಾಧ್ಯಮದ ಜತೆ ಮಾತನಾಡಿ, ತಾಲೂಕಿನಲ್ಲಿ ಕೇವಲ 5 ಮಂದಿಗೆ ನದಿಯಿಂದ ಮರಳು ತೆಗೆಯಲು ಅಧಿಕೃತ ಪರವಾನಗಿ ನೀಡಲಾಗಿದೆ. ಆದರೆ ತಾಲೂಕಿನ ಎಲ್ಲ ನದಿಗಳಲ್ಲಿ, ತೊರೆಗಳಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅದರಿಂದ ಅನಿವಾರ್ಯವಾಗಿ ಪ್ರತಿಭಟನೆ ಆರಂಭಿಸಿದ್ದೇನೆ ಎಂದರು.
ನ್ಯಾಯ ಸಿಗುವವರೆಗೂ ಪ್ರತಿ ದಿನ ಬೆಳಗ್ಗೆ 10ರಿಂದ ಸಾಯಂಕಾಲ 5.30ರವರೆಗೆ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.