ನ್ಯೂಸ್ ನಾಟೌಟ್: ಮಾನಸಿಕ ಖಿನ್ನತೆಗೊಳಗಾಗಿದ್ದ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಭಾನುವಾರ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಿವರಳ್ಳಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಶಿವರಳ್ಳಿ ಗ್ರಾಮದ ಜಿತೇಂದ್ರ ಅಕ್ಷತಾ ದಂಪತಿಯ ಪುತ್ರಿ ವೈಷ್ಣವಿ (13) ಎಂದು ಗುರುತಿಸಲಾಗಿದೆ. ಸೊಮವಾರಪೇಟೆಯ ಖಾಸಗಿ ಶಾಲೆಯ 7 ತರಗತಿಯಲ್ಲಿ ಓದುತ್ತಿದ್ದ ಈಕೆ ಪರೀಕ್ಷೆ ಆರಂಭವಾದ ಒಂದು ವಾರದಿಂದಲೂ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು. ಈ ಬಗ್ಗೆ ಮನೆಯವರು ಕೇಳಿದ್ದರೂ ಯಾವುದನ್ನೂ ಹೇಳಿಕೊಂಡಿರಲಿಲ್ಲ. ಭಾನುವಾರ ರಜಾ ದಿನವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಒಬ್ಬಳನ್ನೇ ಓದಿಕೊಳ್ಳುವಂತೆ ಮನೆಯಲ್ಲಿ ಬಿಟ್ಟು ಪಾಲಕರು ಹೊರಗಡೆ ಹೋಗಿದ್ದಾರೆ. ಈ ವೇಳೆಯಲ್ಲಿ ಮನೆಯಲ್ಲಿ ಬಾಲಕಿ ಏಕಾಏಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವನ್ನು ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿದ್ಯಾರ್ಥಿನಿ ಆತ್ಮಹತ್ಯೆಗೆ, ಮಾನಸಿಕ ಖಿನ್ನತೆಗೆ ಒಳಗಾಗಳು ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಕುರಿತಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯಿಂದ ಸತ್ಯ ಬಯಲಿಗೆ ಬರಲಿದೆ. ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ. ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ. ಮಕ್ಕಳೊಂದಿಗೆ ಪಾಲಕರು ಸ್ನೇಹಿತರಂತೆ ಇರಬೇಕು. ಮಕ್ಕಳ ಸೂಕ್ಷ್ಮತೆ, ಭಾವನೆಗಳನ್ನು ಹೆತ್ತವರು ಅರಿತುಕೊಳ್ಳಬೇಕು. ಮಕ್ಕಳು ತಮ್ಮ ಪಾಲಕರೊಂದಿಗೆ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಲ್ಲಿ ಇಂತಹ ಘಟನೆಗಳು ನಡೆಯುವುದು ತಪ್ಪುತ್ತದೆ.