ನ್ಯೂಸ್ ನಾಟೌಟ್: ಇಂದೋರ್ನ ದೇವಾಲಯವೊಂದರಲ್ಲಿ ಗುರುವಾರ ಬಾವಿಯ ಮೇಲ್ಛಾವಣಿ ಕುಸಿದು ಬಾವಿಗೆ ಬಿದ್ದು ಕನಿಷ್ಠ 13 ಜನರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರು ಎಂದು ತಿಳಿದುಬಂದಿದೆ. ಇದುವರೆಗೆ ಸಾವನ್ನಪ್ಪಿದ 13 ಮಂದಿಯಲ್ಲಿ 10 ಮಂದಿ ಮಹಿಳೆಯರು. ಇನ್ನೂ ಕೆಲವರು ನಾಪತ್ತೆಯಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಎನ್ಡಿಆರ್ಎಫ್ ತಂಡ 13 ಮೃತ ದೇಹಗಳನ್ನು ಬಾವಿಯಿಂದ ಹೊರತೆಗೆದಿದೆ.
ರಾಮ ನವಮಿಯಂದು ಜನರು ಪ್ರಾರ್ಥನೆ ಸಲ್ಲಿಸಲು ಬಾಲೇಶ್ವರ ಮಹಾದೇವ ದೇವಸ್ಥಾನಕ್ಕೆ ಬಂದಿದ್ದು, ಈ ವೇಳೆ ಮಧ್ಯಾಹ್ನ 12.30ರ ಸುಮಾರಿಗೆ ದುರ್ಘಟನೆ ನಡೆದಿದೆ. ಮೆಟ್ಟಿಲುಬಾವಿಯ ಮೇಲ್ಛಾವಣಿಯ ಮೇಲೆ 25ಕ್ಕೂ ಹೆಚ್ಚು ಜನರು ನಿಂತಿದ್ದರಿಂದ, ಕನಿಷ್ಠ 60 ಅಡಿ ಆಳವಿರುವ ಬಾವಿಗೆ ಅವರೆಲ್ಲರೂ ಕುಸಿದು ಬಿದ್ದಿದ್ದಾರೆ.
ಬಾವಿಯ ಮೇಲ್ಛಾವಣಿ ಕುಸಿದುಬಿದ್ದ ಕೂಡಲೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಆದರೆ ಘಟನೆ ಸಂಭವಿಸಿದ ಸ್ಥಳ ಕಿರಿದಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ತಿಳಿದುಬಂದಿದೆ. ಭಕ್ತರ ಸಾವಿನ ಬಗ್ಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಕೈಲಾಶ್ ವಿಜಯವರ್ಗಿಯ ಹಾಗೂ ಇಂದೋರ್ ಮೇಯರ್ ಪುಷ್ಯಮಿತ್ರ ಭಾರ್ಗವ ಸ್ಥಳಕ್ಕೆ ಭೇಟಿ ನೀಡಿದ್ದಾರೆ.