ನ್ಯೂಸ್ ನಾಟೌಟ್: ಸೋಮವಾರ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ನ ಕಾಮಗಾರಿಗಳು ಗುಣಮಟ್ಟದ ಬಗ್ಗೆ ಅಪಸ್ವರ ಎದ್ದಿದ್ದು, ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ಇಲ್ಲಿನ ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗದ ಕಚೇರಿಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಹರಗ ಗ್ರಾಮದ ಹೆಬ್ಬುಳ ಗ್ರೂಪ್ನಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿದರೂ ಈವರೆಗೂ ಕುಡಿಯುವ ನೀರು ಒದಗಿಸಲು ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಶಾಂತಳ್ಳಿಯಲ್ಲೂ ಅರ್ಧ ಅಡಿ ಆಳದ ಚರಂಡಿ ಮಾಡಿ ಪೈಪ್ಲೈನ್ ಕಾಮಗಾರಿ ನಡೆಸುತ್ತಿದ್ದು, ಇದರ ಗುಣಮಟ್ಟದ ಅನುಮಾನ ವ್ಯಕ್ತವಾಗಿದೆ. ಕೇವಲ ಕಾಟಾಚಾರಕ್ಕೆ ಕಾಮಗಾರಿ ನಡೆಸಿ ಅನುದಾನ ದುರುಪಯೋಗಪಡಿಸಿದರೂ ಸಂಬಂಧಪಟ್ಟ ಇಂಜಿನಿಯರ್ ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತಾಲೂಕಿನ ಹಲವೆಡೆ ನಡೆಯುತ್ತಿರುವ ಕೇಂದ್ರ ಸರ್ಕಾರದ ಜಲಜೀವನ್ ಯೋಜನೆಯ ಕಾಮಗಾರಿಗಳು ಕಳಪೆಯಾಗಿದ್ದು, ಅನುದಾನ ಪೋಲಾಗುತ್ತಿದೆ ಎಂದು ಆರೋಪಿಸಿದರು. ಹಲವೆಡೆ ಪೈಪ್ ಒಡೆದು ನೀರು ಪೋಲಾದರೂ ಕೇಳುವವರಿಲ್ಲ. ಶುಂಠಿ ಗ್ರಾಮದಲ್ಲಿಹೊಸದಾಗಿ ನಿರ್ಮಿಸಿದ ನೀರಿನ ಟ್ಯಾಂಕ್ ಸೋರುತ್ತಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದರೂ ಎಇಇ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಕೇವಲ ಕಮಿಷನ್ ವ್ಯವಹಾರದಲ್ಲಿ ಸರ್ಕಾರದ ಅನುದಾನವನ್ನು ಮಧ್ಯವರ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹರಗ ಗ್ರಾಮಸ್ಥ ಡಾಲಿ ಪ್ರಕಾಶ ಆರೋಪಿಸಿದರು.
ಕಳಪೆ ಕಾಮಗಾರಿಯ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳು ಗುತ್ತಿಗೆದಾರರಿಗೆ ಬಿಲ್ ಮಾತ್ರ ತಕ್ಷಣ ಪಾವತಿಸುತ್ತಾರೆ. ಇದರಿಂದ ಈ ಅವ್ಯವಹಾರದಲ್ಲಿ ಅಧಿಕಾರಿಗಳೂ ಪಾಲ್ಗೊಂಡಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಸ್ಥಳಕ್ಕೆ ಬಂದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ದೇವಾನಂದ, ಹರಗ, ಉದ್ರಳ್ಳಿ, ಅಭಿಮಠ ಬಾಚಳ್ಳಿ, ಶಾಂತಳ್ಳಿ, ಶುಂಠಿ ಗ್ರಾಮಗಳಲ್ಲಿ ನಡೆದ ಕಾಮಗಾರಿಗಳ ಪರಿಶೀಲನೆ ನಡೆಸಿ ಮುಂದಿನ 15 ದಿನಗಳಲ್ಲಿ ಸಮಸ್ಯೆಯನ್ನು ಪರಿಹರಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಶಾಂತಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಬೇಬಿ, ಉದ್ರಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ವಿಶುಕುಮಾರ್, ಶುಂಠಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ರತನ್, ಮುಖಂಡರಾದ ಎಸ್.ಬಿ.ಭರತ್ ಕುಮಾರ್, ಕೆ.ಟಿ.ಪರಮೇಶ್, ಶರಣ್, ಬಿದ್ದಪ್ಪ, ಲತೀಶ್ ಯಡೂರು, ಮಹೇಶ್, ಸುಖಾಂತ್, ಲತೀಶ್ ಮತ್ತಿತರು ಉಪಸ್ಥಿತರಿದ್ದರು.