ನ್ಯೂಸ್ ನಾಟೌಟ್: ದಕ್ಷಿಣ ಕನ್ನಡದಲ್ಲಿ ದೈವಾರಾಧನೆ ಮೇಲೆ ಜನರಿಗೆ ಅಪಾರವಾದ ಭಕ್ತಿ, ನಂಬಿಕೆ. ಅದರಲ್ಲೂ ಕಾಂತಾರ ಚಿತ್ರ ರಿಲೀಸ್ ಆದ ನಂತರ ದೈವಾರಾಧನೆ ನೋಡಲು ದೇಶ, ರಾಜ್ಯ, ಜಿಲ್ಲೆಗಳಿಂದ ಜನ ಆಗಮಿಸುತ್ತಿದ್ದಾರೆ. ಆದ್ರೆ ಕೆಲವೊಂದು ಕಡೆ ದೈವ ಕೋಲಗಳನ್ನು ದುರ್ಬಳಕೆ ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಂಬಾರಕೊಡ್ಲೆ ಗ್ರಾಮದಲ್ಲಿ ದೈವ ದರ್ಶನದ ವೇಳೆ ಪಾತ್ರಿಯನೊಬ್ಬ ವಿವಾಹಿತ ಮಹಿಳೆಯನ್ನು ಮದುವೆಯಾಗುವುದಾಗಿ ನುಡಿದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗೂ ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದೆ. ದೈವ ದರ್ಶನಕ್ಕೆಂದು ಬೆಳಗಾವಿಯಿಂದ ಬಂದಿದ್ದ ಮದುವೆಯಾದ ಮಹಿಳೆಗೆ, ದುರ್ಗಾದೇವಿ ಆಹ್ವಾನವಾಗುತ್ತೆ ಎಂದು ನಂಬಲಾದ ಪಾತ್ರಿಯೊಬ್ಬರು ಮದುವೆಯಾಗುವುದಾಗಿ ವಾಗ್ದಾನ ಮಾಡಿರುವ ವಿಡಿಯೋ ಹರಿದಾಡುತ್ತಿದೆ.
ದೇವತಾ ಕಾರ್ಯದಲ್ಲಿ ಪಂಚೆಯನ್ನುಟ್ಟು ಮೈ ಮೇಲೆ ಅರಿಶಿಣ ಚೆಲ್ಲಿಕೊಳ್ಳುತ್ತಾ ಓ… ಎಂದು ಕೂಗುತ್ತಾ ಈ ಬಾಲಕಿಯನ್ನ ಈ ಬಾಲಕ ಮದುವೆಯಾಗುತ್ತಾನೆ. ಇವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿಯಾಗಿ, ಅರ್ಧನಾರೇಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ. ಈ ರೀತಿ ಪಾತ್ರಿ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಸದ್ಯ ಪಾತ್ರಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ.
ಅಡಿಕೆ ಹಿಂಗಾರದಿಂದ ಬಡಿದುಕೊಳ್ಳುತ್ತ ಡಮರು, ಡಕ್ಕೆ, ತಾಳದ ಲಯಕ್ಕೆ ನರ್ತನ ಮಾಡುತ್ತಾ, ಪಾತ್ರಿ ವರ್ತಿಸಿರುವುದನ್ನು ನೋಡಿ ನೆಟ್ಟಿಗರು ಕೋಪಗೊಂಡಿದ್ದಾರೆ. ವಿವಾಹಿತ ಮಹಿಳೆಯನ್ನ ಮದುವೆಯಾಗುವ ದೆಸೆಯಲ್ಲಿ ದೈವದ ಹೆಸರನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪಾತ್ರಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇನ್ನು ನರ್ತಕ ಪಾತ್ರಿಯ ಹೆಂಡತಿ ಬಿಟ್ಟು ಹೋಗಿದ್ದಾಳೆ ಎಂಬ ಮಾಹಿತಿ ಇದೆ. ಇನ್ನೊಂದೆಡೆ ವಿವಾಹಿತ ಮಹಿಳೆಗೂ ಗಂಡ ಬಿಟ್ಟಿರುವ ಮಾಹಿತಿ ಇದೆ ಎನ್ನಲಾಗಿದೆ. ಹೀಗಾಗಿ, ದೇವರ ಹೆಸರಿನಲ್ಲಿ ಪಾತ್ರಿ ಈ ರೀತಿ ನಟಿಸಿರುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ. ಪಾತ್ರಿಯ ಮೇಲೆ ದುರ್ಗಾದೇವಿ ಆಹ್ವಾನವಾಗುತ್ತದೆ ಎಂದು ನಂಬಿ ಭಕ್ತರು ದೂರದೂರುಗಳಿಂದ ಇವರನ್ನು ಭೇಟಿಯಾಗಲು ಆಗಮಿಸುತ್ತಾರೆ ಎನ್ನಲಾಗಿದೆ. ಹತ್ತಾರು ವರ್ಷಗಳಿಂದ ಈ ಸ್ಥಳದಲ್ಲಿ ಈ ಆಚರಣೆ ನಡೆದುಕೊಂಡು ಬರುತ್ತಿದ್ದು, ಸದ್ಯ ಪಾತ್ರಿಯ ಹೊಸ ಅವತಾರಕ್ಕೆ ಜನ ಕೆಂಡಾಮಂಡಲರಾಗಿದ್ದಾರೆ.