ನ್ಯೂಸ್ ನಾಟೌಟ್: ಕೆಲವು ದಿನಗಳಿಂದ ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಹಣ ವಸೂಲಿ ಮಾಡುವವರ ದಂಧೆ ನಡೆಯುತ್ತಿದೆ. ಆಶ್ರಮದ ಹೆಸರು, ಗುರುತಿನ ಚೀಟಿ ತೋರಿಸಿ ಜನರಲ್ಲಿ ಬಟ್ಟೆ, ಧಾನ್ಯ, ಹಣವನ್ನು ವಸೂಲಿ ಮಾಡುತ್ತಿದ್ದ ತಂಡಗಳ ಬಂಡವಾಳ ಇದೀಗ ಬಯಲಾಗಿದೆ.
ಏನಿದು ಘಟನೆ?
ಇಬ್ಬರು ಮಹಿಳೆಯರು ಸೋಮವಾರ ಕೊಯ್ಲದ ಸಮಾಜ ಸೇವಕ ಪ್ರದೀಪ್ ಅವರ ಮನೆಗೆ ಬಂದು ಮೈಸೂರಿನ ಇಲವಾಲ ಬಳಿ ಇರುವ ಅಂಗವಿಕಲ ಹಾಗೂ ವೃದ್ಧಾಶ್ರಮಕ್ಕೆ ಸಹಾಯ ಮಾಡುವಂತೆ ಕೋರಿಕೊಂಡರು. ಬಟ್ಟೆ, ಪುಸ್ತಕ, ದವಸ ಧಾನ್ಯಗಳನ್ನು ಮತ್ತು ಹಣದ ಸಹಾಯ ನೀಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಪ್ರದೀಪ್ ಮಹಿಳೆಯರಿಗೆ ಗುರುತಿನ ಚೀಟಿ ತೋರಿಸುವಂತೆ ಹೇಳಿದ್ದಾರೆ. ಆದರೆ ಸೂಕ್ತ ಪ್ರತಿಕ್ರಿಯೆ ನೀಡದ ಕಾರಣ ಆಶ್ರಮದ ಅಧ್ಯಕ್ಷರು ನೆರವು ನೀಡುವಂತೆ ಪತ್ರ ನೀಡಿದ್ದಾರೆ. ಅದರಲ್ಲಿದ್ದ ಫೋನ್ ನಂಬರ್ ಗೆ ಕಾಲ್ ಮಾಡಿದಾಗ ಆಶ್ರಮದ ಅಧ್ಯಕ್ಷರಾದ ಎಸ್.ರಮೇಶ್ ಕರೆ ಸ್ವೀಕರಿಸಿ ನಮ್ಮ ಆಶ್ರಮದಿಂದ ನಾವು ಯಾರನ್ನು ಸಹಾಯ ಬೇಡಲು ಕಳಿಸಿಲ್ಲ. ನಮ್ಮ ಸಂಸ್ಥೆಯಿಂದ ಆರ್ಥಿಕ, ಬಟ್ಟೆಬರೆ ನೆರವಿಗೆ ಯಾರನ್ನೂ ಕಳುಹಿಸಿಲ್ಲ ಎಂದು ತಿಳಿಸಿದರು. ಇದನ್ನು ಕೇಳಿಸಿಕೊಂಡ ಇಬ್ಬರು ಮಹಿಳೆಯರು ಅಲ್ಲಿಂದ ಪರಾರಿಯಾಗಿದ್ದಾರೆ.
ಈ ತಂಡವು ಉಪ್ಪಿನಂಗಡಿ ಹಳೆಗೇಟು ಬಳಿಯ ನೇತ್ರಾವತಿ ನದಿಯ ಬಳಿ ಬೀಡು ಬಿಟ್ಟಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಇವರು ಹಳೆಯ ಬಟ್ಟೆಗಳನ್ನು ಪಡೆದು, ಚೆನ್ನಾಗಿ ಒಗೆದು ಹೊಸ ಬಟ್ಟೆಗಳ ರೀತಿಯಲ್ಲಿ ಮಾರಾಟ ಮಾಡುವ ಮೂಲಕ ಜನರಿಗೆ ವಂಚನೆ ಮಾಡುತ್ತಿದ್ದರು ಎಂದು ಪ್ರದೀಪ್ ಆರೋಪಿಸಿದರು. ಇಂತಹ ವ್ಯಕ್ತಿಗಳಿಂದ ಜನರು ಯಾವುದೇ ರೀತಿಯಿಂದ ಮೋಸ ಹೋಗಬಾರದು .ವಂಚನೆ ಎಸಗಿದ್ದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.