ನ್ಯೂಸ್ ನಾಟೌಟ್: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಸಮೀಪ ಸೋಮವಾರ ಬೆಳಗ್ಗೆ ಆನೆ ದಾಳಿಯಿಂದ ಇಬ್ಬರು ಮೃತಪಟ್ಟ ಬಳಿಕ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಸಾರ್ವಜನಿಕರ ತೀವ್ರ ಆಕ್ರೋಶದ ಬಳಿಕ ಮೃತರ ಕುಟುಂಬಕ್ಕೆ ತಲಾ 15 ಲಕ್ಷ ರೂ. ಪರಿಹಾರವನ್ನು ಸರ್ಕಾರ ಘೋಷಿಸಿದೆ.
ಇತ್ತೀಚೆಗೆ ತುಳು ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸುವ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದ ಉಳ್ಳಾಲದ ಶಾಸಕ ಯು.ಟಿ ಖಾದರ್ ಇಂದು ಮತ್ತೆ ಆನೆ ದಾಳಿಯ ಸಂತ್ರಸ್ತರ ಕುರಿತು ಮಾತನಾಡಿದ್ದಾರೆ. ಆನೆ ದಾಳಿಯ ವೇಳೆ ರಕ್ಷಣೆಗೆ ದಾವಿಸಿ ಪ್ರಾಣ ಕಳೆದುಕೊಂಡವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡುವಂತೆ ಸದನದಲ್ಲಿ ಒತ್ತಾಯಿಸಿದ್ದಾರೆ. ಎಲ್ಲರ ಜೀವಕ್ಕೆ ಬೆಲೆ ಇದೆ ಮಾನವೀಯ ದೃಷ್ಠಿಯಿಂದ ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಬೇಕೆಂದು ಹೇಳುವ ಮೂಲಕ ಸದನದಲ್ಲಿ ಕರಾವಳಿಯ ಜನರ ಸಮಸ್ಯೆಯ ಕುರಿತು ಎಲ್ಲರ ಗಮನ ಸೆಳೆದರು.
ಯುವತಿಯ ರಕ್ಷಣೆಗೆ ಮುಂದಾದ ರಮೇಶ್ ರೈ ಎಂಬವರು ಜೀವ ಕಳೆದುಕೊಂಡಿದ್ದಾರೆ. ಅವರಿಗೆ ಪರಿಹಾರದ ಜತೆಗೆ ಶೌರ್ಯ ಪ್ರಶಸ್ತಿ ಘೋಷಣೆ ಮಾಡಬೇಕು. ಇದು ಬೇರೆಯವರಿಗೆ ಪ್ರೇರಣೆಯಾಗಲಿದೆ ಎಂದು ಖಾದರ್ ವಿಧಾನಸಭೆ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು.