- ಮಧ್ಯ ಟರ್ಕಿಯಲ್ಲಿ ಮತ್ತೆ ಕಂಪಿಸಿದ ಭೂಮಿ
ನ್ಯೂಸ್ ನಾಟೌಟ್: ಟರ್ಕಿ ಮತ್ತು ನೆರೆಯ ಸಿರಿಯಾ ರಾಷ್ಟ್ರಗಳ ಹಲವು ಭಾಗಗಳಲ್ಲಿ ಸೋಮವಾರ ಮೂರು ಬಾರಿ ಸಂಭವಿಸಿದ ಭಾರಿ ಭೂಕಂಪನದ ಭಯದಿಂದ ಜನರು ಹೊರಬರುತ್ತಿರುವಾಗಲೇ ಮಂಗಳವಾರ ಮತ್ತೆ 5.6 ಪ್ರಮಾಣದಲ್ಲಿ ಮಧ್ಯ ಟರ್ಕಿಯಲ್ಲಿ ಭೂಮಿ ಕಂಪಿಸಿದೆ.
ಈಗಾಗಲೇ ಘಟನೆಯಿಂದ ಮೃತಪಟ್ಟವರ ಸಂಖ್ಯೆ 4000 ದಾಟಿದೆ. ಗಾಯಾಳುಗಳ ಸಂಖ್ಯೆ ಎಂಟು ಸಾವಿರಕ್ಕೂ ಅಧಿಕವಾಗಿದೆ. ಸಾವಿರಾರು ಕಟ್ಟಡಗಳು ನೆಲಸಮವಾಗಿದ್ದು, ಸಾಕಷ್ಟು ಜನರು ಕಟ್ಟಡದಡಿ ಸಿಲುಕಿರುವ ಸಾಧ್ಯತೆಯಿದ್ದು, ಅವರನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರಿದಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಟರ್ಕಿ ಮತ್ತು ಸಿರಿಯಾ ರಾಷ್ಟ್ರಗಳ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿವೆ.
ಭೂಕಂಪನದಿಂದ ತತ್ತರಿಸಿರುವ ಉಭಯ ರಾಷ್ಟ್ರಗಳಿಗೆ ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳು ನೆರವು ಘೋಷಿಸಿವೆ. ಭಾರತದಿಂದ ನುರಿತ ಎನ್ಡಿಆರ್ಎಫ್ ತಂಡ, ವಿಶೇಷ ತರಬೇತಿ ನೀಡಿದ ಶ್ವಾನದಳ, ವೈದ್ಯಕೀಯ ಸೇವೆ, ಕಟ್ಟಡಗಳಡಿ ಸಿಲುಕಿರುವವರನ್ನುಹೊರತೆಗೆಯುವ ವಿಶೇಷ ಯಂತ್ರಗಳನ್ನುಮಂಗಳವಾರ ಕಳುಹಿಸಿಕೊಡಲಾಗಿದೆ.
ಕುಸಿದು ಬಿದ್ದ ಕಟ್ಟಡಗಳ ಅವಶೇಷಗಳನ್ನು ಗಮನಿಸಿದರೆ ಉಭಯ ದೇಶಗಳನ್ನು ಮತ್ತಷ್ಟು ಹಿಂದಕ್ಕೆ ಕೊಂಡೊಯ್ದಂತೆ ಬಾಸವಾಗುತ್ತದೆ. ರಕ್ಕಸ ಭೂಕಂಪನದಿಂದ ಹಲವಾರು ಪಟ್ಟಣಗಳ ಗುರುತೇ ಸಿಗದಂತಾಗಿದೆ. ಟಿರ್ಕಯ ಆಗ್ನೇಯ ಪ್ರಾಂತ್ಯದ ಗಾಜಿಯಾಂಟೆಪ್ ಪಟ್ಟಣದ ಉತ್ತರಕ್ಕೆ 18 ಕಿ.ಮೀ. ಆಳದಲ್ಲಿ ಕಂಪನದ ಕೇಂದ್ರಬಿಂದುವಾಗಿದೆ. ಡಮಾಸ್ಕಸ್ ಮತ್ತು ಬೇರೂತ್ನಲ್ಲಿ ಸಾವಿರಾರು ಜನ ಮೃತಪಟ್ಟು ಲಕ್ಷಾಂತರ ಮಂದಿ ಬೀದಿಪಾಲಾಗಿದ್ದಾರೆ. ಭೂಕಂಪ ಪೀಡಿತ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.