ನ್ಯೂಸ್ ನಾಟೌಟ್: ಮಡಿಕೇರಿಯಲ್ಲಿ ಒಂದೇ ದಿನ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ನಡೆದಿದೆ. ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಈ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯ ಶ್ರೀಮಂಗಳ ಹಾಗೂ ಹುದಿಕೇರಿ ಗ್ರಾಮದಲ್ಲಿ ಸಂಭವಿಸಿದ್ದು, ಶ್ರೀಮಂಗಲ ಹೋಬಳಿಯ ನಾಲ್ಕೇರಿ ಗ್ರಾಮದ ಅಬ್ರುದ್ದೀನ್ (31) ಮತ್ತು ಹುದಿಕೇರಿ ಹೋಬಳಿಯ ಹೈಸೊಡ್ಕೂರು ಗ್ರಾಮದ ಇಸ್ಮಾಯಿಲ್ ಹುಸೇನ್ (33) ಮೃತಪಟ್ಟವರು.ಇಬ್ಬರೂ ಅಸ್ಸಾಂ ಮೂಲದವರು ಎಂದು ತಿಳಿದು ಬಂದಿದೆ.
ನಾಲ್ಕೇರಿ ಗ್ರಾಮದ ತೋಟವೊಂದರಲ್ಲಿ ಬೆಳಗ್ಗೆ 8.30ರ ವೇಳೆಗೆ ಕರಿಮೆಣಸು ಕೊಯ್ಯುತ್ತಿದ್ದ ಸಂದರ್ಭದಲ್ಲಿ 11 ಕೆ.ವಿ. ವಿದ್ಯುತ್ ತಂತಿಗೆ ಏಣಿ ತಗುಲಿ ಅಬ್ರುದ್ದೀನ್ ಆಘಾತಕ್ಕೊಳಗಾದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಅವರು ಮೃತಪಟ್ಟರು. ಸ್ಥಳಕ್ಕೆ ಕುಟ್ಟ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರವಿಶಂಕರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಮಹಜರು ನಡೆಸಿದರು. ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂತಹದ್ದೇ ಇನ್ನೊಂದು ಪ್ರಕರಣ ಹುದಿಕೇರಿ ಹೋಬಳಿಯ ಹೈಸೊಡ್ಲುರು ಗ್ರಾಮದ ಕಾಫಿ ತೋಟದಲ್ಲಿ ಸಂಭವಿಸಿದ್ದು, ಕರಿಮೆಣಸು ಕೊಯ್ಯುತ್ತಿದ್ದ ಇಸ್ಮಾಯಿಲ್ ಹುಸೇನ್ (37) ಅವರಿದ್ದ ಏಣಿ ವಿದ್ಯುತ್ ತಂತಿಗೆ ಏಣಿ ಸ್ಪರ್ಶಿಸಿ ಆಘಾತಕ್ಕೊಳಗಾದರು. ಕೂಡಲೇ ಗೋಣಿ ಕೊಪ್ಪಲಿನ ಆಸ್ಪತ್ರೆಗೆ ಸಾಗಿಸಿದರೂ ದಾರಿಮಧ್ಯೆ ಮೃತಪಟ್ಟರು. ಸ್ಥಳಕ್ಕೆ ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ವಿರೂಪಾಕ್ಷ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ. ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.