ನ್ಯೂಸ್ನಾಟೌಟ್: ಮಂಗಳೂರಿನ ಚಿತ್ರಾಪುರ ಬೀಚ್ನಲ್ಲಿ ಭಾನುವಾರ ಗಾಂಜಾ ಸೇವಿಸಿ ರಿಕ್ಷಾ ಚಾಲಕ ರಿಕ್ಷಾ ಚಾಲಕ ಸುನೀಲ್ ಎಂಬವರಿಗೆ ತಲವಾರು ದಾಳಿ ನಡೆಸಿ, ರಿಕ್ಷಾವನ್ನು ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಅಮಲ್ ಅಜಯನ್ ಮತ್ತು ನಿಶಾಂತ್ ಎಂದು ಗುರುತಿಸಲಾಗಿದೆ. ಈಗಾಗಲೇ ಭಾನುವಾರ ಪ್ರತೀಕ್ ಎಂಬಾತನನ್ನು ಬಂಧಿಸಿದ್ದು, ಇನ್ನುಳಿದವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 307 ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.
ಚಿತ್ರಾಪುರ ಕಡಲ ಕಿನಾರೆಯಲ್ಲಿ ಕಡಲು ಕೊರೆತ ತಡೆಗೆ ಹಾಕಲಾಗಿದ್ದ ಕಲ್ಲುಗಳಲ್ಲಿ ಹಲವು ದಿನಗಳಿಂದ ಯುವಕರ ತಂಡವೊಂದು ಮಾದಕ ವ್ಯಸನ ಸೇವನೆಯಲ್ಲಿ ತೊಡಗಿರುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಭಾನುವಾರ ಸಂಜೆ ತಂಡ ಇದ್ದ ಸ್ಥಳಕ್ಕೆ ತೆರಳಿ ಎಚ್ಚರಿಕೆ ನೀಡಿದ್ದರು. ಎಚ್ಚರಿಕೆ ನೀಡಿದ್ದ ಸ್ಥಳೀಯರ ತಂಡದಲ್ಲಿ ರಿಕ್ಷಾ ಚಾಲಕ ಸುನೀಲ್ ಇದ್ದರು ಎನ್ನಲಾಗಿದ್ದು, ಈ ಕಾರಣಕ್ಕಾಗಿ ಆರೋಪಿಗಳು ರಿಕ್ಷಾವನ್ನು ತಡೆದು ಸುನೀಲ್ ಮೇಲೆ ತಲವಾರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಸ್ಥಳೀಯರು ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಓರ್ವನನ್ನು ವಶಕ್ಕೆ ಪಡೆದಿದ್ದರು. ಮತ್ತಿಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.