ನ್ಯೂಸ್ ನಾಟೌಟ್: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಹಂತಕ ಕಾಡಾನೆ ಕೊನೆಗೂ ಸೆರೆಯಾಗಿದೆ. ಕಳೆದ ಮೂರು ದಿನಗಳಿಂದ ಕಾಡಾನೆ ಹಿಡಿಯಲು ಹರಸಾಹಸ ಮಾಡಲಾಗಿತ್ತು.ಇದೀಗ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ.
ಕಡಬ ಬಳಿಯ ಮೂಜೂರು ರಕ್ಷಿತಾರಣ್ಯದ ಕೊಂಬಾರು(ಮಂಡೆಕರ) ಎಂಬಲ್ಲಿ ಆನೆಯನ್ನು ಪತ್ತೆ ಹಚ್ಚಲಾಗಿದೆ. ಗನ್ ಮೂಲಕ ಆನೆಗೆ ಅರಿವಳಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಫೆ.20ರಂದು ಬೆಳಿಗ್ಗೆ ಕಾಡಾನೆ ದಾಳಿಯಿಂದ ರಂಜಿತಾ (21) ಮತ್ತು ರಮೇಶ್ ರೈ (52 ವ) ಎಂಬವರು ಮೃತಪಟ್ಟಿದ್ದರು.
ನರಹಂತಕ ಕಾಡಾನೆಯನ್ನು ಸೆರೆಹಿಡಿಯಲು ಮೈಸೂರು ದುಬಾರೆಯಿಂದ 5 ಆನೆಗಳನ್ನು ಕಡಬಕ್ಕೆ ಕರೆತರಲಾಗಿತ್ತು. ಫೆ.21 ರಂದು ಡ್ರೋನ್ ಕ್ಯಾಮರಾ ಬಳಸಿ ನರಹಂತಕ ಆನೆಯನ್ನು ಪತ್ತೆಹಚ್ಚುವ ಕಾರ್ಯವನ್ನು ಅರಣ್ಯ ಇಲಾಖೆ ಆರಂಭಿಸಿತ್ತು. ದುಬಾರೆಯ ಆನೆಗಳ ಮೂಲಕ ಸೆರೆಹಿಡಿಯುವ ಕಾರ್ಯಾಚರಣೆಯು ರೆಂಜಲಾಡಿ ಗ್ರಾಮದ ತುಂಬೆ ರಕ್ಷಿತಾರಣ್ಯದಲ್ಲಿ ಆರಂಭಗೊಂಡಿದ್ದು,ನಿನ್ನೆ ಇಡೀ ದಿನ ಆನೆ ಪತ್ತೆಯಾಗಿರಲಿಲ್ಲ.ಇಂದು ಸಂಜೆ ಮತ್ತೆ ಆನೆಯನ್ನು ಪತ್ತೆ ಹಚ್ಚಿ ಅರಿವಳಿಕೆ ಮದ್ದು ಶೂಟ್ ಮಾಡಿ ಆನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.