ನ್ಯೂಸ್ ನಾಟೌಟ್: ಚೆನ್ನೈನ ಮಹಿಳಾ ಅಧಿಕಾರಿಯೊಬ್ಬರು ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡೇಟು ಮಾಡಿ ಬಂಧಿಸಿದ ಘಟನೆ ನಡೆದಿದೆ. ವಿಶೇಷವೆಂದರೆ ಆರೋಪಿಯೊಬ್ಬನ ಮೇಲೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಓಪನ್ ಆಗಿ ಫೈರಿಂಗ್ ಮಾಡಿದ ರಾಜ್ಯದ ಮೊದಲ ಪ್ರಕರಣ ಇದಾಗಿದೆ.
ಘಟನೆಯ ವಿವರ:
ಗುಂಡೇಟು ತಿಂದ ಆರೋಪಿಯನ್ನು 22 ವರ್ಷದ ಸೂರ್ಯ ಅಲಿಯಾಸ್ ಬೆಂಡ್ ಸೂರ್ಯ ಎಂದು ಗುರುತಿಸಲಾಗಿದೆ. ಮೂತ್ರ ವಿಸರ್ಜನೆಗೆ ಹೋಗಿದ್ದ ಆರೋಪಿ ತಪ್ಪಿಸಿಕೊಂಡಾಗ ಈ ಘಟನೆ ಸಂಭವಿಸಿದೆ. ಭಾನುವಾರ ಬೆಳಗ್ಗೆ 4 ಗಂಟೆಗೆ ಕೊನ್ನೂರು ಹೆದ್ದಾರಿಯಲ್ಲಿ ವಾಹನ ತಪಾಸಣೆ ವೇಳೆ ಸೂರ್ಯ, ಗೌತಮ್ ಮತ್ತು ಅಜಿತ್ನನ್ನು ಪೊಲೀಸರು ತಡೆದರು. ಮೂವರು ಕೂಡ ಸ್ಥಳದಲ್ಲಿದ್ದ ಇನ್ಸ್ಪೆಕ್ಟರ್ ಶಂಕರ್ ಅವರ ಮೇಲೆ ಕಬ್ಬಿಣ ಸಲಾಕೆಯಿಂದ ದಾಳಿ ಮಾಡಿ , ದ್ವಿಚಕ್ರ ವಾಹನದ ಮೂಲಕ ಪರಾರಿಯಾಗಿದ್ದರು. ಇದಾದ ಬಳಿಕ ಗೌತಮ್ ಮತ್ತು ಅಜಿತ್ನನ್ನು ಪೊಲೀಸರು ಬಂಧಿಸಿದ್ದರು. ತಿರುವಳ್ಳೂರಿನ ಸಂಬಂಧಿಕರ ಮನೆಯಲ್ಲಿ ಆರೋಪಿ ಸೂರ್ಯ ಇರುವ ಬಗ್ಗೆ ಸುಳಿವು ಪಡೆದ ಪೊಲೀಸರು ಅಲ್ಲಿಗೆ ಒಂದು ತಂಡವಾಗಿ ನಿನ್ನೆ (ಫೆ.22) ಬೆಳಗ್ಗೆ ತೆರಳಿದ್ದರು. ಬಳಿಕ ಸೂರ್ಯನನ್ನು ಬಂಧಿಸಿ, ಪೊಲೀಸ್ ಠಾಣೆಗೆ ಕರೆತರುವಾಗ ಮೂತ್ರ ವಿಸರ್ಜನೆಗೆಂದು ರಸ್ತೆ ಪಕ್ಕದಲ್ಲಿ ಗಾಡಿ ನಿಲ್ಲಿಸಲಾಯಿತು. ಮೂತ್ರ ವಿಸರ್ಜನೆಗೆ ಹೋಗಿದ್ದ ಆರೋಪಿ ತಪ್ಪಿಸಿಕೊಂಡು, ಕಬ್ಬಿನ ಜ್ಯೂಸ್ ಅಂಗಡಿಯತ್ತ ಓಡಿ ಹೋಗಿ, ಅಲ್ಲಿದ್ದ ಚಾಕು ತೆಗೆದುಕೊಂಡನು. ಈ ವೇಳೆ ಆತನನ್ನು ಹಿಡಿಯಲು ಹೋದ ಸರವಣ ಕುಮಾರ್ ಮತ್ತು ಅಮಾನುದ್ದೀನ್ ಹೆಸರಿನ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿಯೇ ಬಿಟ್ಟ.
ಆರೋಪಿಗೆ ಚಿಕಿತ್ಸೆ:
ದಾಳಿ ಮಾಡಿ ಎಸ್ಕೇಪ್ ಆಗಲು ಯತ್ನಿಸಿದಾಗ ಮೀನಾ ಅವರು ಶರಣಾಗುವಂತೆ ಹೇಳಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ, ಆರೋಪಿ ಮೀನಾ ಅವರ ಮೇಲೆ ದಾಳಿ ಮಾಡಲು ಯತ್ನಿಸಿದಾಗ ಆತನ ಮೊಣಕಾಲಿನ ಕೆಳಗೆ ಮೀನಾ ಅವರು ಶೂಟ್ ಮಾಡಿದ್ದಾರೆ. ಈ ವೇಳೆ ಗಾಯಗೊಂಡು ಕುಸಿದು ಬಿದ್ದ ಆರೋಪಿ ಸೂರ್ಯನನ್ನು ಕಿಲ್ಪೌಕ್ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.ಆರೋಪಿ ಸೂರ್ಯ, ಕೊಲೆ ಯತ್ನ, ಮೊಬೈಲ್ ಹಾಗೂ ಸರಗಳ್ಳತನ ಸೇರಿದಂತೆ ಒಟ್ಟು 14 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.