ನ್ಯೂಸ್ನಾಟೌಟ್: ಗೋ ಹತ್ಯಾ ನಿಷೇಧ ಕಾನೂನು ಸಮರ್ಪಕ ಜಾರಿಯಾಗಬೇಕು. ಜತೆಗೆ ಗೋಸಂರಕ್ಷಣೆಗೆ ಪೂರಕ ಯೋಜನೆಗಳಿಗೆ ನೆರವು ನೀಡಬೇಕು. ದೇವಸ್ಥಾನಗಳ ಭೂಮಿ ಅತಿಕ್ರಮಣ ತಡೆಗಟ್ಟಲು ಕ್ರಮ. ಸನಾತನ ಧರ್ಮ, ಸಂಸ್ಕೃತಿಗಳಿಗೆ ಆದ್ಯತೆ, ಕರಾವಳಿಯ ಪ್ರಾಕೃತಿಕ, ಸಾಂಸ್ಕೃತಿಕ, ಧಾರ್ಮಿಕ ಸಂಪನ್ಮೂಲಗಳಿಗೆ ಹಾನಿಯಾಗದಂತೆ ಔದ್ಯೋಗಿಕ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು ಮೊದಲಾದ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಕರಾವಳಿಯ ಸ್ವಾಮೀಜಿಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಸಲ್ಲಿಸಿದರು.
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಬಳಿಕ ಕರಾವಳಿಯ ಸಾಧು ಸಂತರ ಸಮಾಲೋಚನಾ ಸಭೆಯಲ್ಲಿ ಮನವಿ ಸಲ್ಲಿಸಲಾಯಿತು.
ಕರಾವಳಿಯ ತುಳು ಭಾಷೆಗೆ ಸಂವಿಧಾನದ 8ನೇ ಪರಿಚ್ಛೇದದಡಿ ಮಾನ್ಯತೆ ನೀಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಆದ್ಯತೆ. ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಕ್ರಮ ಕೈಗೊಳ್ಳಬೇಕು. ಲವ್ ಜಿಹಾದ್ ಮತ್ತು ಉಗ್ರವಾದಿ ಚಟುವಟಿಕೆಗಳನ್ನುಮಟ್ಟಹಾಕಲು ಕರಾವಳಿ ಮಲೆನಾಡು ಜಿಲ್ಲೆಗಳನ್ನು ಕೇಂದ್ರವಾಗಿಟ್ಟುಕೊಂಡು ರಾಷ್ಟ್ರೀಯ ತನಿಖಾ ದಳದ ವಿಭಾಗವನ್ನು ಶೀಘ್ರ ಆರಂಭಿಸಬೇಕು. ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ ನೀಡಬೇಕು ಎಂದು ಮನವಿಯಲ್ಲಿ ತಮ್ಮ ಬೇಡಿಗಳನ್ನು ವಿವರಿಸಿದ್ದಾರೆ.
ಈ ಸಂದರ್ಭ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ರಾಮಕೃಷ್ಣ ಆಶ್ರಮ ಬೈಲೂರಿನ ಶ್ರೀ ವಿನಾಯಕಾನಂದ ಸ್ವಾಮೀಜಿ, ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ, ಶ್ರೀ ಆನೆಗುಂದಿ ಸರಸ್ವತಿ ಪೀಠಂ ಉಡುಪಿಯ ಶ್ರೀ ಕಾಳ ಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ., ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರಾದ ಸುನೀಲ್ ಕುಮಾರ್, ಎಸ್. ಅಂಗಾರ, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್ ಮತ್ತಿತರರಿದ್ದರು.