ನ್ಯೂಸ್ ನಾಟೌಟ್ : ಕಡಬದ ರೆಂಜಿಲಾಡಿಯಲ್ಲಿ ಕಾಡಾನೆ ಇಬ್ಬರನ್ನು ಬಲಿ ಪಡೆದುಕೊಂಡಿದ್ದು,ಘಟನೆಯಲ್ಲಿ ರಂಜಿತಾ ಹಾಗೂ ರಮೇಶ್ ರೈ ಮೃತಪಟ್ಟಿದ್ದರು.ಇದೀಗ ಸುಬ್ರಹ್ಮಣ್ಯ ಸಮೀಪದ ಗುಂಡ್ಯದಲ್ಲಿಯೂ ಕಾಡಾನೆಯು ತನ್ನ ಪುಂಡಾಟ ಮೆರೆದಿದ್ದು, ಅರಣ್ಯ ಇಲಾಖೆಗೆ ಸೇರಿದ ನರ್ಸರಿಗೆ ಲಗ್ಗೆಯಿಟ್ಟು ಹಾನಿಯಾದ ಘಟನೆ ಸಂಭವಿಸಿದೆ.ಘಟನೆಗೆ ಸಂಬಂಧಿಸಿದಂತೆ ಅಲ್ಲೂ ಆನೆಯನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಕಾಡು ಗಿಡಗಳು,ಪೈಪ್ ಸೇರಿದಂತೆ ಸ್ಥಳದಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದೆ ಎಂದು ವರದಿಯಾಗಿದೆ.ಮೊನ್ನೆಯಷ್ಟೇ ಸಂಪಾಜೆಯಲ್ಲೂ ಕಾಡಾನೆ ದಾಳಿ ನಡೆಸಿ ತೋಟಕ್ಕೆ ಹಾನಿಯಾದ ಘಟನೆಯೂ ನಡೆದಿತ್ತು.
ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಇಬ್ಬರನ್ನು ಕೊಂದ ಬಳಿಕ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು, ಮಂಗಳವಾರ ಆರಂಭಗೊಂಡ ಕಾರ್ಯಾಚರಣೆಯಲ್ಲಿ ೨ ದಿನದ ಬಳಿಕ ಕೊಂಬಾರು ಬಳಿಯ ಮಂಡೆಕರದಲ್ಲಿ ಕೃತ್ಯ ಎಸಗಿದ ಕಾಡಾನೆಯನ್ನು ಸೆರೆ ಹಿಡಿದು ನಾಗರಹೊಳೆ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ.ಇದರ ಜತೆ ಮುಂಜಾಗ್ರತ ಹಿನ್ನೆಲೆಯಲ್ಲಿ ಅಭಿಮನ್ಯು ಹಾಗೂ ಇನ್ನೊಂದು ಆನೆಯನ್ನೂ ಕರೆದೊಯ್ಯಲಾಗಿದೆ.ಶುಕ್ರವಾರದ ಕಾರ್ಯಾಚರಣೆಯಲ್ಲಿ ಶಿಬಿರದಲ್ಲಿದ್ದ ಮೂರು ಆನೆಗಳಿಗೆ ವಿರಾಮ ನೀಡಲಾಗಿತ್ತು. ಬೆಳಗ್ಗೆ ಮೂರು ಸಾಕಾನೆಗಳನ್ನು ಪೇರಡ್ಕ ಬಳಿಯ ಶಿಬಿರದಿಂದ ನೆಟ್ಟಣದ ಕೇಂದ್ರೀಯ ಮರ ಸಂಗ್ರಹಣ ಘಟಕಕ್ಕೆ ಕರೆದೊಯ್ದು ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸಿಬ್ಬಂದಿ ಕಾಡಾನೆ ಪತ್ತೆ ಕಾರ್ಯ ಮುಂದುವರಿಸಿದ್ದರು.