ನ್ಯೂಸ್ ನಾಟೌಟ್: ಏಳನೇ ವೇತನ ಆಯೋಗ ಜಾರಿಯ ಜೊತೆಗೆ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯ ಕುರಿತು ಬಜೆಟ್ ನಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿ ಜಾರಿಗೊಳಿಸದಿರುವುದನ್ನು ಖಂಡಿಸಿ ಹಾಗೂ ಹೊಸ ಪಿಂಚಣಿ ನೀತಿ ಪದ್ದತಿಗೆ ಆಗ್ರಹಿಸಿ 5.11 ಲಕ್ಷ ನೌಕರರು ನಾಳೆಯಿಂದ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏಳನೇ ವೇತನ ಆಯೋಗ ಈಚೆಗೆ ಪ್ರಶ್ನಾವಳಿಗಳನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರಿ ನೌಕರರು ಮತ್ತು ಸಾರ್ವಜನಿಕರು, ಇಲಾಖೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಅಭಿಪ್ರಾಯಗಳನ್ನು ಆಹ್ವಾನಿಸಿತ್ತು. ಅಹವಾಲು ಸಲ್ಲಿಕೆಯ ಅವಧಿ ಇದೇ 28ಕ್ಕೆ ಕೊನೆಗೊಳ್ಳಲಿದೆ. ಮರು ದಿನದಿಂದಲೇ ನೌಕರರ ಮುಷ್ಕರ ಆರಂಭವಾಗುತ್ತಿದೆ ಎಂದು ಈ ಹಿಂದೆಯೇ ಪ್ರಕಟಣೆ ನೀಡಲಾಗಿತ್ತು.
ಗ್ರಾಮ ಪಂಚಾಯಿತಿ ಸಿಬ್ಬಂದಿ, ಶಿಕ್ಷಕರು, ನಗರದ ಸ್ಥಳೀಯ ಸಂಸ್ಥೆಗಳು, ಬಿಬಿಎಂಪಿ ಕಾಯಂ ಪೌರಕಾರ್ಮಿಕರು ಮತ್ತು ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಶಾಲಾ – ಕಾಲೇಜು, ತ್ಯಾಜ್ಯ ವಿಲೇವಾರಿ, ಕಂದಾಯ ಮತ್ತು ಆರೋಗ್ಯ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇವೆ ಎನ್ನಲಾಗಿದೆ.
ಕರ್ನಾಟಕ ಸಚಿವಾಲಯದ ನೌಕಕರು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ವಿವಿಧ ನಿಗಮ ಮಂಡಳಿಗಳ ನೌಕರರು ಮುಷ್ಕರದಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಸ ಸಂಗ್ರಹಣೆ, ಶಾಲಾ ಕಾಲೇಜುಗಳು, ಹೊರ ರೋಗಿಗಳ ಸೇವೆ, ಆಸ್ತಿ ನೋಂದಣಿ, ತಹಸೀಲ್ದಾರ್ ಕಚೇರಿ ಇವುಗಲ ಸೇವೆಯ ಬಗ್ಗೆ ಖಚಿತ ಮಾಹಿತಿ ದೊರೆಯದಿದ್ದರೂ ಇವುಗಳು ಕಾರ್ಯ ನಿರ್ವಹಿಸುವುದು ಬಹುತೇಕ ಅನುಮಾನ ಎನ್ನಲಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ, ಒಳರೋಗಿಗಳ ಆರೈಕೆ ಸೇವೆ, ಬಸ್ ಸಂಚಾರ, ವಿಶ್ವವಿದ್ಯಾಲಯಗಳಲ್ಲಿನ ತರಗತಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ಮುಷ್ಕರದ ಸಮಯದಲ್ಲಿ ನೌಕರರು ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಧರಣಿ ನಡೆಸುವುದು, ಸರ್ಕಾರದ ವಿರುದ್ಧ ಯಾವುದೇ ಘೋಷಣೆ ಮಾಡುವಂತಿಲ್ಲ ಎಂದು ನೌಕರರ ಸಂಘ ನಿರ್ಬಂಧ ವಿಧಿಸಿದೆ.
ಕೆಲಸಕ್ಕೆ ಗೈರುಹಾಜರಾಗುವ ಮೂಲಕ ಶಾಂತಿಯುತವಾಗಿ ಮುಷ್ಕರ ನಡೆಸಬೇಕು. ಸಂಘ ನಿಗದಿಪಡಿಸಿದ ಮಾಹಿತಿ ಒಳಗೊಂಡ ಪೋಸ್ಟರ್ಗಳನ್ನು ಮಾತ್ರ ಪ್ರಚುರಪಡಿಸಲು ಸೂಚಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾಹಿತಿ ನೀಡಿದ್ದಾರೆ.