ನ್ಯೂಸ್ ನಾಟೌಟ್: ಕರಾವಳಿ ಕರ್ನಾಟಕದಲ್ಲಿ ಜಾನಪದ ಕ್ರೀಡೆಯಾದ ಕಂಬಳ ನೂರಾರು ವರ್ಷದ ಇತಿಹಾಸ ಹೊಂದಿದೆ. ಹೀಗಾಗಿ ಕಂಬಳಕ್ಕೆ ನಾಡ ಕ್ರೀಡೆಯ ಸ್ಥಾನಮಾನವನ್ನು ನೀಡುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಕುರಿತು ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಧಾನ ಮಂಡಲ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮಾಡಿದ್ದು, ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ಕಂಬಳಕ್ಕೆ ಸೂಕ್ತ ಸ್ಥಾನಮಾನ ಒದಗಿಸುವ ಕುರಿತು ಚಿಂತಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಹಿಂದೆ ಕಂಬಳ ಒಂದು ಪ್ರಾಣಿ ಹಿಂಸೆಯ ಕ್ರೀಡೆ ಎಂದು ಪ್ರಾಣಿ ದಯಾ ಸಂಘವಾದ ಪೇಟಾ ( PETA) ವಿರೋಧಿಸಿತ್ತು, ಆ ಸಂದರ್ಭದಲ್ಲಿ ಕರಾವಳಿ ಕರ್ನಾಟಕ ಭಾಗದ ಜನತೆಯ ತೀವ್ರ ವಿರೋಧದ ನಡುವೆ ಪೇಟಾ ಸಂಘಟನೆಗೆ ಕೋರ್ಟ್ ನಲ್ಲೂ ಹಿನ್ನಡೆಯಾಗಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳ ಪ್ರಕಾರ ರಾಜ್ಯ ಸರ್ಕಾರ ಧಾರ್ಮಿಕ ಮತ್ತು ಜಾನಪದ ಮೌಲ್ಯವಿರುವ ಆ ಆಚರಣೆಗೆ ವಿಶೇಷ ಮಾನ್ಯತೆ ನೀಡುವ ಕುರಿತು ಒಲವು ತೋರಿಸಿದೆ.
“ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ ಹಾಸುಹೊಕ್ಕಾದ ಈ ಕ್ರೀಡೆ ಪ್ರಸಿದ್ಧ ಜಾನಪದ ಕ್ರೀಡೆಯಾಗಿದೆ, ಹಾಗು ಇದು ಬರೀ ಕ್ರೀಡೆಯಲ್ಲ, ಧಾರ್ಮಿಕ ಮಹತ್ವವನ್ನು ಕೂಡ ಹೊಂದಿದೆ. ಕೃಷಿ ಬದುಕಿನ ಒಂದು ಪ್ರಮುಖ ಅಂಗವಾಗಿರುವ ಕಂಬಳವನ್ನು ಜನರು ಶ್ರದ್ಧೆ, ಭಕ್ತಿಯಿಂದ ಸೇವೆ ರೂಪದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ” ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಪೂಜಾರಿ ಹೇಳಿದರು. ಇದಕ್ಕೆ ಮೂಲ ಸೌಲಭ್ಯ ಹಾಗೂ ಸೂಕ್ತ ಸ್ಥಾನ ಸಿಗಬೇಕೆಂದು ಅವರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ ಕರ್ನಾಟಕ ಕ್ರೀಡಾರತ್ನ, ಕ್ರೀಡಾ ಪೋಷಕ ಪ್ರಶಸ್ತಿಗಳನ್ನು ನೀಡುವ ಮೂಲಕ ಸರ್ಕಾರ ಕಂಬಳವನ್ನು ಪ್ರೋತ್ಸಾಹಿಸಿದೆ. ಕಂಬಳಕ್ಕಾಗಿ ಕ್ರೀಡಾಂಗಣ ನಿರ್ಮಿಸುವ ಯೋಜನೆಗಳನ್ನು ಕೈಗೊಂಡಿದೆ. ಇನ್ನೀಗ ಕಂಬಳವನ್ನು ರಾಜ್ಯಮಟ್ಟದ ಕ್ರೀಡೆಯಾಗಿ ಪರಿಗಣಿಸುವ ಪ್ರಸ್ತಾಪ ಪರಿಶೀಲನೆಯಲ್ಲಿದೆ ಎಂದು ಮಾಹಿತಿ ನೀಡಿದರು.