ನ್ಯೂಸ್ ನಾಟೌಟ್: ಕಡಬ ತಾಲೂಕಿನ ಮೀನಾಡಿಯ ನೈಲ ಎಂಬಲ್ಲಿ ಎರಡು ಮುಗ್ದ ಜೀವಗಳು ಬಲಿಯಾಗಿದೆ. ಇನ್ನೂ ಭವಿಷ್ಯದ ಕನಸು ಕಟ್ಟಿಕೊಂಡಿದ್ದ ಹುಡುಗಿ ಮಣ್ಣಲ್ಲಿ ಮಣ್ಣಾಗಿದ್ದಾಳೆ. ಹೆತ್ತವರ ದುಃಖ ಮುಗಿಲು ಮುಟ್ಟಿದೆ. ಹುಡುಗಿಯ ರಕ್ಷಣೆಗೆ ಬಂದ ವ್ಯಕ್ತಿಯೂ ತಮ್ಮ ಜೀವ ಕಳೆದುಕೊಂಡಿದ್ದಾರೆ. ಕಾಡಾನೆ ದಾಳಿಗೆ ಎರಡು ಅಮೂಲ್ಯ ಜೀವ ಬಲಿಯಾಗಿ ಬಿಟ್ಟಿದೆ. ಮನೆಯ ಸಮೀಪದ ರಸ್ತೆಯಲ್ಲಿ ಹೊಂಚು ಹಾಕಿ ಕುಳಿತಿದ್ದ ಆನೆಗಳು ಸೋಮವಾರ ಬೆಳಗ್ಗೆ ಬಡಪಾಯಿಗಳ ಮೇಲೆ ಮುಗಿ ಬಿದ್ದು ಕೊಂದು ಬಿಟ್ಟಿವೆ. ಈ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡ-ಕೊಡಗು ಗಡಿ ಜಿಲ್ಲೆಯ ಸಂಪಾಜೆ ಗ್ರಾಮದಲ್ಲೂ ಕಳೆದ ಕೆಲವು ತಿಂಗಳಿಂದ ಆನೆಗಳ ಪುಂಡಾಟ ಮಿತಿ ಮೀರಿದೆ ಎಂದು ವರದಿಯಾಗಿದೆ.
ಮಂಗಳವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಶಂಕರ್ ಪ್ರಸಾದ್ ರೈ, ದಿವಂಗತ ಎನ್.ಎಸ್.ದೇವಿ ಪ್ರಸಾದ್ ಅವರ ಮನೆಯ ತೋಟಗಳ ಮೇಲೆಯೂ ಆನೆಗಳ ದಾಳಿ ನಡೆದಿದೆ. ಅಪಾರ ಪ್ರಮಾಣದ ಕೃಷಿ ನಷ್ಟವಾಗಿದೆ. ರಾಷ್ಟ್ರೀಯ ಹೆದ್ದಾರಿ ತನಕ ನುಗ್ಗುವ ಧೈರ್ಯ ತೋರಿಸಿದ ಆನೆಗಳು ಮುಂದೆ ಯಾರ ಜೀವಕ್ಕಾದರೂ ಸಂಚಕಾರ ತರುವ ಅಪಾಯ ಇರುವುದಂತೂ ನಿಜ. ಆದರೆ ಇದನ್ನು ಹೀಗೆ ನಿರ್ಲ್ಯಕ್ಷಿಸಿದರೆ ನಾಳೆ ಏನಾದರೂ ಅಪಾಯ ಸಂಭವಿಸಿದರೆ ಇದಕ್ಕೆ ನೇರವಾಗಿ ಸರಕಾರ ಹಾಗೂ ಅರಣ್ಯ ಇಲಾಖೆ ಕಾರಣವಾಗಿರುತ್ತೆ.
ಸದ್ಯ ಎರಡು ಆಥವಾ ಮೂರು ಆನೆಗಳು ಇದೆ ಅನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಓಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಗ್ರಾಮಸ್ಥರು, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಟಿಎಂ ಶಹೀದ್ ಸೇರಿದಂತೆ ಹಲವು ಮುಖಂಡರು ಸ್ಥಳಕ್ಕೆ ಆಗಮಿಸಿದ್ದಾರೆ. ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಆನೆಗಳನ್ನು ಓಡಿಸಲು ಪ್ರತಿ ಸಲ ಬಳಕೆಯಾಗುವ ಸಾಂಪ್ರದಾಯಿಕ ಮಾರ್ಗ ಎಂದರೆ ಅದು ಗರ್ನಲ್ ಹೊಡೆಸುವುದು, ಅದನ್ನು ಬಿಟ್ಟರೆ ಜನರು ಗುಂಪು ಕಟ್ಟಿಕೊಂಡು ಹಿಂದಿನಿಂದಲೇ ಆನೆಗಳನ್ನು ಹೆದರಿಸಿಕೊಂಡು ಓಡುವುದು. ಹಾಗೆ ಹೋದ ಆನೆಗಳು ದೂರ ಹೋದವು ಅಂದುಕೊಳ್ಳವಷ್ಟರಲ್ಲಿ ಮತ್ತೆ ಪ್ರತ್ಯಕ್ಷವಾಗಿಜೀವ ಹಿಂಡುತ್ತವೆ. ಸಂಪಾಜೆ ಗ್ರಾಮದಲ್ಲಿ ಹೆಚ್ಚಿನವರು ರಬ್ಬರ್ ಕೃಷಿ ನಂಬಿದ್ದಾರೆ. ಸದ್ಯ ರಬ್ಬರ್ ಕೃಷಿ ಮಾಡಿಕೊಂಡ ಕೆಲವು ತೋಟದ ಮಾಲೀಕರ ತೋಟವನ್ನೇ ಆನೆಗಳು ಈಗ ತಮ್ಮ ಅಡ್ಡವಾಗಿ ಮಾಡಿಕೊಂಡು ಬಿಟ್ಟಿವೆ. ಇದರಿಂದ ಮಾಲೀಕರ ತೋಟಕ್ಕೆ ಕೆಲಸ ಮಾಡುವುದಕ್ಕೆ ಯಾವ ಕೆಲಸಗಾರನೂ ಸಿಕ್ಕುತ್ತಿಲ್ಲ. ಜಮೀನನ್ನು ಆನೆಗಳಿಗೆ ನೀಡಿ ಅಸಹಾಯಕರಾಗಿ ಕುಳಿತಿದ್ದಾರೆ. ಹೀಗಿರುವಾಗ ಇದಕ್ಕೊಂದು ಶಾಶ್ವತ ಪರಿಹಾರ ನೀಡುವುದಕ್ಕೆ ನಮ್ಮ ಜನ ಪ್ರತಿನಿಧಿಗಳಿಗೆ ಸಾಧ್ಯವಿಲ್ಲವೇ ಅನ್ನುವುದು ಪ್ರಶ್ನೆಯಾಗಿದೆ.
ಆನೆ ಅಪಾಯಕಾರಿ ಪ್ರಾಣಿ. ಮದ ಏರಿದರೆ ಎದುರಿಗೆ ಸಿಕ್ಕಿದ್ದನ್ನೆಲ್ಲ ಪುಡಿ ಮಾಡಿಕೊಂಡು ಸಾಗುತ್ತದೆ. ಆನೆ ಸಂಚಾರದ ಜಾಗ ಆಗಿದ್ದರೆ ತಕ್ಷಣಕ್ಕೆ ನೀವು ಅಲರ್ಟ್ ಆಗಿ. ಬೆಳಗ್ಗೆ ಬೇಗ ಅಥವಾ ಕತ್ತಲಾಗುವ ಹೊತ್ತಿನಲ್ಲಿ ಆ ದಾರಿಗಳಲ್ಲಿ ನಡೆದುಕೊಂಡು ಬರುವ ಸಾಹಸ ಮಾಡಬೇಡಿ. ರಾತ್ರಿ ವೇಳೆ ಮನೆಯಿಂದ ಹೊರ ಬಂದು ಅಡ್ಡಾಡಬೇಡಿ. ನಿಮ್ಮ ಎಚ್ಚರಿಕೆ ನಿಮ್ಮ ಕೈನಲ್ಲಿ ಇದ್ದರೆ ಸಂಭವನೀಯ ದುರಂತ ತಪ್ಪಿಸಿಕೊಳ್ಳಬಹುದು. ಅನಾಹುತ ಸಂಭವಿಸಿದ ನಂತರ ಕೊರಗುವ ಬದಲು ಅನಾಹುತ ಸಂಭವಿಸುವ ಮೊದಲು ಎಚ್ಚರಿಕೆಯಿಂದ ಇರೋಣ ಅನ್ನುವುದು ನ್ಯೂಸ್ ನಾಟೌಟ್ ಕಳಕಳಿ.