ನ್ಯೂಸ್ನಾಟೌಟ್: ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ, ಕನ್ನಡಿಗ ಎಸ್. ಅಬ್ದುಲ್ ನಜೀರ್ ಅವರು ಶುಕ್ರವಾರ ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆಂಧ್ರಪ್ರದೇಶದ ರಾಜಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು, ನಜೀರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ, ಅವರ ಪತ್ನಿ ವೈ.ಎಸ್ ಭಾರತಿ, ರಾಜ್ಯದ ಮಂತ್ರಿಗಳು ಹಾಗೂ ಹೈಕೋರ್ಟ್ನ ನ್ಯಾಯಮೂರ್ತಿಗಳು ಸಮಾರಂಭದಲ್ಲಿ ಹಾಜರಿದ್ದರು. ಈ ಹಿಂದೆ ಆಂಧ್ರಪ್ರದೇಶ ರಾಜ್ಯಪಾಲರಾಗಿದ್ದ ಬಿಸ್ವಾ ಭೂಷನ್ ಹರಿಚಂದ್ರನ್ ಅವರನ್ನು ಚತ್ತೀಸ್ಗಢ ವರ್ಗಾವಣೆ ಮಾಡಲಾಗಿದೆ.
1958ರ ಜನವರಿ 5ರಂದು ಜನಿಸಿದ್ದ ಅಬ್ದುಲ್ ನಜೀರ್ ಅವರು ಕರ್ನಾಟಕದ ಉಡುಪಿ ಜಿಲ್ಲೆಯ ಬೆಳುವಾಯಿ ಮೂಲದವರು. 1983ರ ಫೆಬ್ರವರಿ 18ರಂದು ವಕೀಲರಾಗಿ ನೋಂದಾಯಿಸಿಕೊಂಡ ಅವರು ನಂತರದ ದಿನಗಳಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ ಅಭ್ಯಾಸ ಮಾಡಿದರು. 2003ರ ಮೇ 12ರಂದು ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಫೆಬ್ರವರಿ 17, 2017 ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ಜನವರಿ ನಾಲ್ಕರಂದು ಸುಪ್ರೀಂ ಕೋರ್ಟ್ನ ನ್ಯಾಯಾಧೀಶ ಹುದ್ದೆಯಿಂದ ನಿವೃತ್ತರಾಗಿ ಬೀಳ್ಕೊಡುವ ಸಂದರ್ಭ ಸಿಜೆಐ ಡಿವೈ ಚಂದ್ರಚೂಡ್ ಅವರು ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರ ಸರಳತೆಯ ಬಗ್ಗೆ ಪ್ರಸ್ತಾಪಿಸಿದ್ದರು.
ನ್ಯಾಯಮೂರ್ತಿಯಾಗಿದ್ದ ನಜೀರ್ ಅವರು ನವೆಂಬರ್ 2019ರಲ್ಲಿ ರಾಮ ಜನ್ಮಭೂಮಿ ಪ್ರಕರಣದ ಮೊಕದ್ದಮೆಯನ್ನು ಇತ್ಯರ್ಥಪಡಿಸಿದ ಐವರು ನ್ಯಾಯಾಧೀಶರ ಪೀಠದಲ್ಲಿ ಇವರು ಒಬ್ಬರಾಗಿದ್ದರು. ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ), ರಂಜನ್ ಗೊಗೊಯ್ ನೇತೃತ್ವದ ಅಯೋಧ್ಯೆ ಪೀಠದಲ್ಲಿ ನ್ಯಾಯಮೂರ್ತಿ ನಜೀರ್ ಏಕೈಕ ಮುಸ್ಲಿಂ ವ್ಯಕ್ತಿಯಾಗಿದ್ದರು.