ನ್ಯೂಸ್ ನಾಟೌಟ್ : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ ಅನ್ನು ಸ್ವಾಧೀನ ಪಡಿಸಿಕೊಂಡಿದೆ.ತನಿಖೆ ವೇಳೆ ಫ್ರೀಡಂ ಕಮ್ಯೂನಿಟಿ ಹಾಲ್ನಲ್ಲಿ ಪಾಪ್ಯುಲರ್ ಫ್ರಂಟ್ ಅಫ್ ಇಂಡಿಯಾದ ಸದಸ್ಯರಿಗೆ ಅನಧಿಕೃತವಾಗಿ ಭಯೋತ್ಪಾದನೆಗೆ ಸಹಕಾರಿಯಾಗುವಂತಹ ಶಸ್ತ್ರಾಸ್ತ್ರ ತರಬೇತಿಯನ್ನು ನೀಡಲಾಗುತ್ತಿತ್ತು ಎಂಬ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್ಐಎ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಕಮ್ಯುನಿಟಿ ಹಾಲ್ ಇರುವ 20 ಗುಂಟೆ ಜಾಗವನ್ನು ಎನ್ಐಎ ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಈ ವಿಚಾರವಾಗಿ ಆದೇಶದ ಪ್ರತಿಯನ್ನು ಹಾಲ್ ಮಾಲೀಕರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಲಾಗಿದೆ ಎಂದು ಎನ್ಐಎ ಅಧಿಕೃತ ಮೂಲಗಳು ತಿಳಿಸಿವೆ. ಈ ಭೂಮಿ, ಕಟ್ಟಡವನ್ನು ಪರಭಾರೆ ಮಾಡುವುದಾಗಲಿ, ಬಾಡಿಗೆಗೆ ನೀಡುವುದಾಗಲಿ, ಯಾವುದೇ ಬದಲಾವಣೆ ಮಾಡುವುದಾಗಲಿ, ಬಳಸಿಕೊಳ್ಳುವುದಾಗಲೀ ಮಾಡುವುದನ್ನು ಸಂಪೂರ್ಣವಾಗಿ ಎನ್ಐಎ ನಿಷೇಧಿಸಿ, ವಶಕ್ಕೆ ಪಡೆದಿರುವ ಕುರಿತು ಆದೇಶ ಜಾರಿಗೊಳಿಸಿದೆ.