ನ್ಯೂಸ್ ನಾಟೌಟ್: ಕಲಬುರ್ಗಿ ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ಸೋಮವಾರ ಫೆ.೨೦ರ ಬೆಳಗ್ಗೆ ನಡೆಯುತ್ತಿದ್ದ ಸಂತ ಸೇವಾಲಾಲ ಜಯಂತಿ ವೇದಿಕೆಯ ಸಮೀಪ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ. ಈ ಗಲಾಟೆಯಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎಂದು ತಿಳಿದುಬಂದಿದೆ. ಈ ವೇಳೆ ಇಬ್ಬರು ಬೆಂಬಲಿಗರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಅನಿಲ್ ಹಾಗೂ ಶಾಂತಕುಮಾರ್ ಎಂದು ಗುರುತಿಸಲಾಗಿದ್ದು, ಇವರಿಬ್ಬರು ಮಣಿಕಂಠ ರಾಠೋಡ್ ಬೆಂಬಲಿಗರು ಎಂದು ಹೇಳಲಾಗುತ್ತಿದೆ. ಗಾಯಗೊಂಡ ಇಬ್ಬರನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.
ಘಟನೆಯ ಕುರಿತು ಮಾಧ್ಯಮಗಳಿಗೆ ವಿಷಯ ಹಂಚಿಕೊಂಡ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ “ನನ್ನ ಮೇಲೆ ಪ್ರಿಯಾಂಕ ಖರ್ಗೆ ಬೆಂಬಲಿಗರು ದಾಳಿ ಮಾಡಿದ್ದಾರೆ. ಇತ್ತೀಚಿಗೆ ನಡೆದ ಬೆಳವಣಿಗೆಯಲ್ಲಿ ಅವರು ನನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಮಣಿಕಂಠ ರಾಠೋಡ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಚಿವ ಚಿತ್ತಾಪುರ ಹಾಲಿ ಶಾಸಕ ಪ್ರಿಯಾಂಕ ಖರ್ಗೆ ವಿರುದ್ಧ ತುಂಬಾ ಹಗುರವಾಗಿ ಮಾತನಾಡಿದಲ್ಲದೆ, ಚುನಾವಣೆಯಲ್ಲಿ ಸೋಲಿಸುವ ಹಿನ್ನೆಲೆಯಲ್ಲಿ ಕೆಲವು ಅಸಂಬದ್ಧ ಮಾತುಗಳನ್ನು ಆಡಿದ್ದರು ಎಂದು ಮೂಲಗಳು ತಿಳಿಸಿವೆ.