ನ್ಯೂಸ್ ನಾಟೌಟ್ : ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಅನ್ನೊದಕ್ಕೆ ಇಲ್ಲೊಬ್ಬರು ಕೃಷಿಕ ಉದಾಹರಣೆಯಾಗಿ ನಿಲ್ಲುತ್ತಾರೆ.ವಿದ್ಯಾವಂತ ಯುವಕರು ಕೂಡ ಇದೀಗ ಕೃಷಿಯತ್ತ ಒಲವು ತೋರಿ ಕೃಷಿಯಲ್ಲಿ ವಿನೂತನ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಕೊರೊನಾ ಕಲಿಸಿದ ಪಾಠ ಅಷ್ಟಿಷ್ಟಲ್ಲ.ಉದ್ಯೋಗ ಕಳೆದು ಕೊಂಡವರು ಪಟ್ಟಣ ಬಿಟ್ಟು ಮನೆ ಕಡೆ ತೆರಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಯಶಸ್ಸು ಕಂಡವರು ಅನೇಕರಿದ್ದಾರೆ. ಅಂತವರ ಸಾಲಿಗೆ ಸುಳ್ಯ ತಾಲೂಕಿನ ಐವರ್ನಾಡಿನ ಕೃಷಿಕರೊಬ್ಬರು ಸೇರಿಕೊಳ್ಳುತ್ತಿದ್ದಾರೆ.ವಿಭಿನ್ನ ಕೃಷಿಯನ್ನು ಮಾಡಿ ಇತರರಿಗೂ ಸ್ಪೂರ್ತಿಯಾಗಿದ್ದಾರೆ.
ಹೆಸರು ನವೀನ್ ಚಾತುಬಾಯಿ,ಸುಳ್ಯ ತಾಲೂಕಿನ ಐವರ್ನಾಡಿನವರು.ಕೃಷಿ ಅಂದ್ರೆ ಏನು ಅಂತ ಗೊತ್ತಿಲ್ಲದೇ ಇದ್ದರೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರು.ಕಡಿಮೆ ಬಂಡವಾಳದಲ್ಲಿ ಹೆಚ್ಚು ಆದಾಯ ಗಳಿಸಿ ಇದೀಗ ಇತರರಿಗೂ ಮಾದರಿಯಾಗಿದ್ದಾರೆ. ಕೃಷಿ ವಿಜ್ಞಾನ ಕೇಂದ್ರದ ಸಹಾಯ ಪಡೆದು ಮುತ್ತು ಕೃಷಿಯಲ್ಲಿ ಕಡಿಮೆ ಹಣವನ್ನು ಹೂಡಿಕೆ ಮಾಡಿ ಭಾರಿ ಮಟ್ಟದ ಲಾಭ ಪಡೆದುಕೊಳ್ಳುತ್ತಿದ್ದಾರೆ.
ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯೋಗಗಳ ಮೂಲಕ ಇಂದು ಯಾರು ಮಾಡದ ಸಾಧನೆಯನ್ನು ಮಾಡಿ ವಿಭಿನ್ನ ಕೃಷಿಕರೆನಿಸಿಕೊಂಡಿದ್ದಾರೆ. ಗಾಂಧಿ ಕೃಷಿ ವಿಜ್ಞಾನ ಕೇಂದ್ರ ನೀಡಿದ ಸಲಹೆಗಳನ್ನು ಅನುಸರಿಸಿ ತಮ್ಮ ಕೃಷಿ ಭೂಮಿಯಲ್ಲಿ ಸಿಹಿನೀರಿನ ಕೃಷಿಯನ್ನು ಶುರು ಮಾಡಿದರು.ಆರಂಭದಲ್ಲಿ ಹಲವು ತೊಡಕುಗಳಾದರೂ ಕುಗ್ಗಲಿಲ್ಲ. ಈ ಕೃಷಿಯನ್ನು ಮುಂದುವರಿಸಬೇಕೆನ್ನುವ ಹಠದಿಂದ ಆರಂಭಿಕ ಹೂಡಿಕೆಯ ಸಣ್ಣ ಉತ್ತೇಜನದೊಂದಿಗೆ, ಅವರು ತಮ್ಮ ಮನೆಯಲ್ಲಿಯೇ ಎರಡು ಟ್ಯಾಂಕ್ ಗಳನ್ನು ನಿರ್ಮಿಸಿದರು .ಅಲ್ಲಿಯೇ ಮುತ್ತು ಕೃಷಿಯನ್ನು ಪ್ರಾರಂಭಿಸಿದರು.ಈ ಬಗ್ಗೆ ತಮ್ಮ ಹಿತೈಷಿಗಳ ಸಲಹೆ ಸೂಚನೆಗಳನ್ನು ಪಡೆದರು.ಇದಾದ ಬಳಿಕ ಮುತ್ತುಗಳಿಗೆ ಬೇಡಿಕೆ ಎಲ್ಲಿ ಇದೆ ಎಂಬುದನ್ನು ಮನಗಂಡು ಅಧ್ಯಯನ ನಡೆಸಿದರು. ಸ್ನೇಹಿತರೊಬ್ಬರ ಸಹಾಯದಿಂದ ಹೈದರಾಬಾದ್ ನ ಡೀಲರ್ ಗೆ ಅದೇ ವರ್ಷದಲ್ಲಿ ಮುನ್ನೂರು ಮುತ್ತುಗಳನ್ನು ಮಾರಾಟ ಮಾಡಿದ ಹೆಮ್ಮೆ ಇವರದ್ದು.
ಸದಾ ಸೃಜನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ನವೀನ್ ಚಾತುಬಾಯಿ ಅವರು , ತಾನು ಏನಾದರೂ ಮಾಡಬೇಕು ಎಂದು ಯೋಚಿಸಿದರು.ಅದೇ ಸಂದರ್ಭದಲ್ಲಿ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ನೀಡಿದ ಮುತ್ತು ಬೇಸಾಯದ ಮಾರ್ಗಸೂಚಿಗಳನ್ನು ಅಧ್ಯಯನ ಮಾಡಿದರು. ಇದಾದ ಬಳಿಕ 25,000 ರೂಪಾಯಿಗಳ ಆರಂಭಿಕ ಹೂಡಿಕೆಯೊಂದಿಗೆ ಮುಂದುವರೆದು ಟ್ಯಾಂಕ್ ಗಳನ್ನು ನಿರ್ಮಿಸಿದರು.ಇಂದು ಈ ಮುತ್ತು ಕೃಷಿ ಇವರ ಕೈ ಹಿಡಿದು ಮುನ್ನಡೆಸುತ್ತಿದೆ. ವಿಶೇಷವೆಂದರೆ ಸಿಹಿನೀರಿನ ಮುತ್ತು ಕೃಷಿಗೆ ಹೆಚ್ಚಿನ ಹೂಡಿಕೆಯ ಅಗತ್ಯವಿಲ್ಲ. ಅನೇಕ ಜಾತಿಯ ಮಸೆಲ್ ಗಳು ಲಭ್ಯವಿದ್ದರೂ, ಕೆಲವು ಮಾತ್ರ ಮುತ್ತು ಕೃಷಿಗೆ ಸೂಕ್ತವಾಗಿವೆ ಎಂದು ನವೀನ್ ಅವರು ಅಭಿಪ್ರಾಯ ಪಡುತ್ತಾರೆ.
ಇದಲ್ಲದೆ, ನವೀನ್ ತನ್ನ ನೀರಿನ ಟ್ಯಾಂಕ್ ಗಳಲ್ಲಿ ಅಲಂಕಾರಿಕ ಮೀನುಗಳನ್ನು ಸಹ ಸಾಕುತ್ತಿದ್ದಾರೆ. ದೊಡ್ಡ ಟ್ಯಾಂಕ್ ಗಳನ್ನು ನಿರ್ಮಿಸಿದರೆ ಮುತ್ತು ಕೃಷಿಯೊಂದಿಗೆ ಜಲಚರ ಸಾಕಣೆಯನ್ನು ಸಹ ಮಾಡಬಹುದು ಎಂದು ನವೀನ್ ಅವರು ಹೇಳುತ್ತಾರೆ. ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸುವುದು ಮತ್ತು ನೇರ ಸೂರ್ಯನ ಬೆಳಕಿನಿಂದ ರಕ್ಷಿಸುವುದು ಸೇರಿದಂತೆ ಮುತ್ತು ಕೃಷಿಗೆ ವೈಜ್ಞಾನಿಕ ಜ್ಞಾನದ ಅಗತ್ಯವಿದ್ದು,ನೀರಿನ ಟ್ಯಾಂಕ್ ಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕಾದ ಅಗತ್ಯವಿದೆ.ಇದಲ್ಲದೆ, ಮಸೆಲ್ ಗಳಿಗೆ ಸರಿಯಾದ ಆರೈಕೆ ಅಗತ್ಯವಾಗಿದ್ದು, ಇದು 12 ತಿಂಗಳಲ್ಲಿ ಎರಡು ಮುತ್ತುಗಳನ್ನು ಉತ್ಪಾದಿಸುತ್ತಿದೆಯಂತೆ!ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರು ಸಿಹಿನೀರಿನ ಮುತ್ತು ಕೃಷಿಯ ಸಾಧ್ಯತೆಗಳ ಬಗ್ಗೆ ಈ ಹಿಂದೆ ಮಾತನಾಡಿದ್ದರು ಮತ್ತು ರೈತರಿಗೆ ಅಲ್ಲಿಂದ ಈ ಕಲ್ಪನೆ ಬಂದಿದೆ.ಇದರಿಂದ ಪ್ರೇರೆಪಣೆಗೊಂಡ ನವೀನ್ ಅವರು ಮುತ್ತುಗಳನ್ನು ಕೊಯ್ಲು ಮಾಡಲು ಸಿಹಿನೀರಿನಲ್ಲಿ ಮಸೆಲ್ ಗಳನ್ನು ಬೆಳೆಸುವ ಆಯ್ಕೆಗಳನ್ನು ಅನ್ವೇಷಿಸಲು ನಿರ್ಧರಿಸಿದರು.