ನ್ಯೂಸ್ ನಾಟೌಟ್: ಸರಣಿ ಭೂಕಂಪನಗಳಿಗೆ ಸಿಲುಕಿ ಟರ್ಕಿ ಮತ್ತು ಸಿರಿಯಾ ದೇಶಗಳು ಬೆಚ್ಚಿ ಬಿದ್ದಿವೆ. ಕ್ಷಣ – ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ 7,800ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದ್ದು, ಟರ್ಕಿ ಮತ್ತು ಸಿರಿಯಾ ಹೆಣಗಳ ರಾಶಿಯಿಂದ ತುಂಬಿದೆ. ಇನ್ನೂ ಲಕ್ಷಕ್ಕೂ ಅಧಿಕ ಮಂದಿ ಕಟ್ಟಡದ ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ ಇದೆ. ಕಟ್ಟಡದಡಿ ಸಿಲುಕಿರುವ ಬಹುತೇಕ ಮಂದಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ದುರಂತದ ಬಗ್ಗೆ ಅವಲೋಕಿಸುತ್ತಿರುವ ಭೂಕಂಪ ತಜ್ಞರು ಮಾಹಿತಿ ನೀಡಿದ್ದಾರೆ.
ಪ್ರಪಂಚದಾದ್ಯಂತ ಭಾರತ ಸೇರಿದಂತೆ ವಿವಿಧ ದೇಶಗಳ ನುರಿತ ರಕ್ಷಣಾ ತಜ್ಞರ ತಂಡ ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾಕ್ಕೆ ಕಾರ್ಯಾಚರಣೆಗೆ ಧಾವಿಸಿವೆ. 24,000ಕ್ಕೂ ಹೆಚ್ಚು ತುರ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಸೋಮವಾರ ನಡೆದ ಭೂಕಂಪದಿಂದ ಟರ್ಕಿಯೊಂದರಲ್ಲೇ ಸುಮಾರು 6,000 ಕಟ್ಟಡಗಳು ನೆಲಸಮವಾಗಿವೆ. ಭಯಾನಕ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾ ರಾಷ್ಟ್ರ ಅಕ್ಷರಶ ನಲುಗಿ ಹೋಗಿದೆ. ಅವಶೇಷದಲ್ಲಿ ಹುಡುಕಾಡಿದಷ್ಟು ಮೃತದೇಹಗಳು ಸಿಗುತ್ತಿವೆ. ಅಲ್ಲೊಂದು ಇಲ್ಲೊಂದರಂತೆ ಅವಶೇಷದಡಿ ಜೀವಂತ ಮಕ್ಕಳೂ ಸಿಗುತ್ತಿದ್ದಾರೆ. ಅಳುವ ಶಬ್ದ ಕೇಳಿ ಮಕ್ಕಳನ್ನು ಹೊರತೆಗೆಯಲಾಗುತ್ತಿದೆ. ಸಿರಿಯಾದಲ್ಲೂ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಅಲ್ಲಿ ಸುಮಾರು 1932 ಜನರು ಮೃತಪಟ್ಟಿದ್ದಾರೆ. ಟರ್ಕಿಯಲ್ಲಿ 5,894 ಮೃತಪಟ್ಟಿದ್ದಾರೆ. ಈ ಸಾವಿನ ಸಂಖ್ಯೆಯು 20,000ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.
ಇದೀಗ ಟರ್ಕಿ ಮತ್ತು ಸಿರಿಯಾದಲ್ಲಿ ಶೀತ ವಾತಾವರಣವಿದ್ದು, ಹಿಮ ಮಳೆ ಸುರಿಯುತ್ತಿದೆ. ಕಟ್ಟಡಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವುದೇ ಹರಸಾಹಸವಾಗಿದೆ. ತೀವ್ರ ಚಳಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿದ್ದು, ಇದು ಗಾಯದ ಮೇಲೆ ಉಪ್ಪು ಸುರಿದಂತಾಗಿದೆ.