ನ್ಯೂಸ್ ನಾಟೌಟ್: ಕೇಂದ್ರ ಸರ್ಕಾರ ಜನರಿಗಾಗಿ ಕೆಲವೊಂದು ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಆದರೆ ಅ ಯೋಜನೆ ಸದ್ವಿನಿಯೋಗವಾದರೆ ಮಾತ್ರ ಸರ್ಕಾರಗಳ ಉದ್ದೇಶ ಈಡೇರುತ್ತದೆ. ಆದರೆ ಉತ್ತರಪ್ರದೇಶದ ಹಳ್ಳಿಯೊಂದರ ನಾಲ್ವರು ಮಹಿಳೆಯರು ಸರ್ಕಾರದ ಯೋಜನೆಯ ಹಣವನ್ನು ಪಡೆದು ತಮ್ಮ ಗಂಡನನ್ನೇ ಬಿಟ್ಟು ಪ್ರಿಯಕರನ ಜತೆ ಪರಾರಿಯಾದ ವಿಚಿತ್ರ ಘಟನೆಯೊಂದು ನಡೆದಿದೆ.
ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಮನೆ ನಿರ್ಮಿಸಿಕೊಳ್ಳಲೆಂದು ಕೇಂದ್ರ ಸರ್ಕಾರವು ಪಿಎಂಎವೈ ಯೋಜನೆಯಡಿ ಮಹಿಳೆಯರ ಹೆಸರಿನಲ್ಲಿಯೇ ಮನೆ ನಿರ್ಮಾಣಕ್ಕಾಗಿ ಸಹಾಯಧನ ನೀಡುತ್ತದೆ. ಅದರಂತೆ ಉತ್ತರಪ್ರದೇಶದ ಬಾರಂಬಾಕಿ ಜಿಲ್ಲೆಯ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗೃಹ ನಿರ್ಮಾಣಕ್ಕಾಗಿ ನಾಲ್ವರು ವಿವಾಹಿತ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಪಾವತಿಯಾಗಿತ್ತು. ತಲಾ 50,000 ಸಾವಿರ ರೂಪಾಯಿಯಂತೆ ಹಣ ಖಾತೆ ಜಮೆಯಾಗಿದ್ದೇ ತಡ. ಈ ಮಹಿಳೆಯರು ಹಣವನ್ನು ಪಡೆದುಕೊಂಡು ತಮ್ಮ ಗಂಡಂದಿರನ್ನು ಬಿಟ್ಟು ಪ್ರಿಯಕರನ ಜತೆ ಪರಾರಿಯಾಗಿದ್ದಾರೆ. ಈ ವಿಷಯ ತಿಳಿದ ಗಂಡಂದಿರಿಗೆ ದಿಕ್ಕುತೋಚದಂತಾಗಿದೆ.
ಪಿಎಂಎವೈ ಯೋಜನೆಯಡಿ ಮಂಜೂರಾದ ಅನುದಾನದಲ್ಲಿ ಎಷ್ಟು ಮನೆಗಳು ನಿರ್ಮಾಣವಾಗಿವೆ ಎಂದು ಜಿಲ್ಲಾಧಿಕಾರಿ ತನಿಖೆ ನಡೆಸಿ ಮನೆ ನಿರ್ಮಿಸದವರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದರು. ಆಗ ಅರ್ಜಿದಾರರ ಪತಿಯಂದಿರು ನಡೆದ ಘಟನೆಯನ್ನು ಜಿಲ್ಲಾಧಿಕಾರಿಗೆ ತಿಳಿಸಿ ತಮ್ಮ ಪತ್ನಿಯರು ಯೋಜನೆಯ ಹಣ ಪಡೆದು ಅವರ ಪ್ರಿಯಕರನ ಜತೆಗೆ ಓಡಿ ಹೋಗಿದ್ದಾರೆ. ಇದರಿಂದ ಮನೆ ನಿರ್ಮಾಣ ಕಾರ್ಯ ಆರಂಭಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಅವರ ಸಹಾಯಧನದ ಮುಂದಿನ ಕಂತನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಮದು ತಿಳಿದುಬಂದಿದೆ.