ನ್ಯೂಸ್ ನಾಟೌಟ್: ವಿಧಾನಸಭೆ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಕೆಗಳು ಗರಿಗೆದರಿವೆ. ರಾಜಕೀಯ ಪಕ್ಷಗಳ ಪ್ರಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮತ ಬೇಟೆಗಾಗಿ ನಾನಾ ರೀತಿಯ ಸರ್ಕಸ್ಗಳನ್ನು ಮಾಡುತ್ತಿವೆ. ಬಿಜೆಪಿ ಕೂಡ ರಾಜ್ಯದಲ್ಲಿ ಮತ್ತೆ ಕಮಲ ಅರಳಿಸಲು ಕಸರತ್ತು ನಡೆಸುತ್ತಿದೆ. ಇದೀಗ ಮಾರ್ಚ್ 3 ರಂದು ಬೆಂಗಳೂರಿಗೆ ಅಮಿತ್ ಶಾ ಮತ್ತೊಮ್ಮೆ ಭೇಟಿ ನೀಡಲಿದ್ದಾರೆ.
ಇದೇ ವೇಳೆ ಕಮಿಷನರ್ ಕಚೇರಿಯ ಕಮಾಂಡ್ ಸೆಂಟರ್ಗೆ ಭೇಟಿ ನೀಡಲಿದ್ದು, ನಂತರ ಸೇಫ್ ಸಿಟಿ ಪ್ರಾಜೆಕ್ಟ್ಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ರಾಜ್ಯಕ್ಕೆ ಕೇಂದ್ರದ ನಾಯಕರು ಪದೇ ಪದೆ ಆಗಮಿಸುತ್ತಿದ್ದಾರೆ. ಸೋಮವಾರ (ಫೆ.27 ) ಶಿವಮೊಗ್ಗ ಮತ್ತು ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಶಿವಮೊಗ್ಗದ ವಿಮಾಣ ನಿಲ್ದಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಇದೀಗ ಮತ್ತೆ ರಾಜ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮಾ.3ರಂದು ಕೇಂದ್ರ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಪೊಲೀಸ್ ಆಯುಕ್ತರು ನೇತೃತ್ವದಲ್ಲಿ ಸರಣಿ ಸಭೆ ನಡೆಯುತ್ತಿದೆ.