ನ್ಯೂಸ್ ನಾಟೌಟ್ : ಕಳೆದ ಮೂರು ದಿನದ ಹಿಂದೆ ಮಂಗಳೂರಿನ ಜ್ಯುವೆಲ್ಲರ್ಸ್ ಗೆ ನುಗ್ಗಿ ದುಷ್ಕರ್ಮಿಯೊಬ್ಬ ಸಿಬ್ಬಂದಿಯನ್ನು ಕೊಲೆಗೈದ ಘಟನೆಗೆ ಸಂಬಂಧಿಸಿದಂತೆ ಮಹತ್ವದ ಸುಳಿವು ಲಭಿಸಿದೆ. ಮಂಗಳೂರು ನಗರ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಮಠ ರಸ್ತೆಯಲ್ಲಿರುವ ಜ್ಯುವೆಲ್ಲರ್ಸ್ ಗೆ ನುಗ್ಗಿ ವ್ಯಕ್ತಿಯೊಬ್ಬರನ್ನು ಕೊಲೆಗೈದ ಆರೋಪಿಯ ಕುರುಹು ಪೋಲಿಸರಿಗೆ ಇದೀಗ ಲಭ್ಯವಾಗಿದೆ.
ಶಂಕಿತ ಆರೋಪಿಯು ಕಪ್ಪು ಬಣ್ಣದ ಜರ್ಕಿನ್, ಜೀನ್ಸ್ ಪ್ಯಾಂಟ್ , ಶೂ ,ಹೆಗಲಿನಲ್ಲಿ ಬ್ಯಾಗ್ ಹಾಕಿಕೊಂಡಿದ್ದಾನೆ. ಗುರುತು ಮರೆಮಾಚಲು ಕ್ಯಾಪ್, ಮಾಸ್ಕ್, ಕೂಲಿಂಗ್ ಗ್ಲಾಸ್ ಧರಿಸಿದ್ದಾನೆ. ನಗರದ ಬಲ್ಮಠ-ಹಂಪನಕಟ್ಟೆ ರಸ್ತೆಯ ವಿವಿಧ ನಾಲ್ಕು ಸಿಸಿಟಿವಿಗಳಲ್ಲಿ ಈತ ಸಂಚರಿಸುವುದು ಪತ್ತೆಯಾಗಿದೆ.ಅಂಗಡಿಯ ಸಮೀಪದ ಸಿಸಿಟಿವಿಯಲ್ಲಿ ಕೃತ್ಯ ಎಸಗಿದ ಬಳಿಕ ಈತ ಓಡಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ.
ಆರೋಪಿಯು ಚಿನ್ನ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿಯೊಳಗೆ ಇದ್ದ ಸಿಬ್ಬಂದಿ ರಾಘವೇಂದ್ರ ಆಚಾರ್ ಎಂಬವರನ್ನು ಚೂರಿಯಿಂದ ತಿವಿದು ಕೊಲೆಗೈದು ಪರಾರಿಯಾಗಿದ್ದ. ಸಿಸಿಟಿವಿಗಳಲ್ಲಿ ದಾಖಲಾದ ಚಿತ್ರಣಗಳಲ್ಲಿ ವ್ಯಕ್ತಿಯ ಭಾವಚಿತ್ರವು ಪತ್ತೆಯಾಗಿದೆ. ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಈ ಕೆಳಕಂಡ ಅಧಿಕಾರಿಯವರ ಮೊಬೈಲ್ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಪೋಲಿಸ್ ಪ್ರಕಟಣೆ ತಿಳಿಸಿದೆ.
ಎಸಿಪಿ ಸಿಸಿಬಿ, ಮಂಗಳೂರು ನಗರ – ಪಿ.ಎ ಹೆಗಡೆ 9945054333
ಎಸಿಪಿ ಕೆಂದ್ರ ಉಪವಿಭಾಗ, ಮಂಗಳೂರು ನಗರ – ಮಹೇಶ್ ಕುಮಾರ್ -9480805320
ಕೊಲೆಗಾರ ಪಾದಾಚಾರಿಯಾಗಿ ಬಂದು ಕೃತ್ಯ ಎಸಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಕೃತ್ಯ ಒಬ್ಬನೇ ಎಸಗಿರಬಹುದು ಎಂಬ ಅನುಮಾನ ಆತನ ಚಲನವಲನದಿಂದ ಮೂಡಿದೆ. ಕಳೆದ ಶುಕ್ರವಾರ ನುಗ್ಗಿದ್ದ ದುಷ್ಕರ್ಮಿ ಚಿನ್ನದಂಗಡಿಯ ಸಿಬ್ಬಂದಿ ಚೂರಿಯಿಂದ ಇರಿದು ಹತ್ಯೆ ಮಾಡಿದ್ದ. ಈ ವೇಳೆ ಒಟ್ಟು 12 ಗ್ರಾಂ ತೂಕದ 60,000 ರೂ. ಮೌಲ್ಯದ 3 ಚಿನ್ನದ ಸರಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾನೆಂದು ಅಂಗಡಿಯ ಮಾಲೀಕರು ದೂರು ನೀಡಿದ್ದರು.