ನ್ಯೂಸ್ ನಾಟೌಟ್: ಲಂಚ ಕೊಡದಿದ್ದರೆ ಮರಳು ಸಾಗಾಟದ ಕೇಸ್ ಅನ್ನು ದಾಖಲಿಸುವುದಾಗಿ ಬೆದರಿಕೆಯೊಡ್ಡಿದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೋಮಶೇಖರ್ ಸಜ್ಜನ್ ಎನ್ನುವವರೇ ಲಂಚ ಕೇಳಿದ ಆರೋಪದಡಿಯಲ್ಲಿ ಸಿಲುಕಿರುವ ಪೊಲೀಸ್ ಸಿಬ್ಬಂದಿ ಆಗಿದ್ದಾರೆ.
ಇತ್ತೀಚೆಗೆ ಬಿಳಿಗೇರಿ ಗ್ರಾಮದ ವ್ಯಕ್ತಿಯೊಬ್ಬರು ಬೊಲೋರೊ ವಾಹನದಲ್ಲಿ ಮನೆಗೆ ಮಣ್ಣು ಸಾಗಿಸುತ್ತಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ಪೊಲೀಸ್ ಸಿಬ್ಬಂದಿ ಸೋಮಶೇಖರ್ ಸಜ್ಜನ್ ೧೦ ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಹಣವನ್ನು ನೇರವಾಗಿ ತೆಗೆದುಕೊಳ್ಳದ ಸಜ್ಜನ್ ಬೀಡಾ ಅಂಗಡಿಯಲ್ಲಿ ನೀಡಲು ಹೇಳಿದ್ದರು ಎನ್ನಲಾಗಿದೆ. ಈ ಸಮಯದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಬೀಡಾ ಅಂಗಡಿಯವ ನೀಡಿದ ಮಾಹಿತಿ ಮೇರೆಗೆ ಸೋಮಶೇಖರ್ ಸಜ್ಜನ್ನನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಇದೀಗ ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.