ನ್ಯೂಸ್ನಾಟೌಟ್: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ವತಿಯಿಂದ ರಾಜ್ಯಾದ್ಯಂತ ಫೆ. 11ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದ್ದು,ಇದರ ಅಂಗವಾಗಿ ಸುಳ್ಯ ನ್ಯಾಯಾಲಯದಲ್ಲೂ ಅಂದು ಬೆಳಗ್ಗೆ 9.30ರಿಂದ ಸಂಜೆ 4 ಗಂಟೆಯವರೆಗೆ ಲೋಕ ಅದಾಲತ್ ನಡೆಯಲಿದೆ.
ಈ ಬಗ್ಗೆ ಸೋಮವಾರ ಸುಳ್ಯ ನ್ಯಾಯಾಲಯದ ಕಿರಿಯ ಸಿವಿಲ್ ನ್ಯಾಯಾಧೀಶೆ ಅರ್ಪಿತಾ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಈ ಸಂದರ್ಭ ಮಾತನಾಡಿದ ನ್ಯಾಯಾಧೀಶೆ ಅರ್ಪಿತಾ, ಸಾರ್ವಜನಿಕರು ತಮ್ಮ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತಕ್ಷಣ ಪರಿಹಾರ ಪಡೆದುಕೊಳ್ಳಲು ಲೋಕ ಅದಾಲತ್ ಕಾರ್ಯಕ್ರಮ ಸುವರ್ಣಾವಕಾಶವಾಗಿದೆ ಎಂದರು.
ಲೋಕ ಅದಾಲತ್ತಿನಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನಃ ಸ್ಥಾಪಿಸಲ್ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣಗಳು, ಕರ್ನಾಟಕ ರಿಯಲ್ ಎಸ್ಟೇಟ್ ಅಧಿಕಾರಕ್ಕೆ ಸಂಬಂಧಪಟ್ಟ ಪ್ರಕರಣಗಳು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ, ಸಾಲ ವಸೂಲಾತಿ ನ್ಯಾಯಾಧೀಕರಣ ಪ್ರಕರಣಗಳು, ವೈವಾಹಿಕ/ ಕುಟುಂಬ ನ್ಯಾಯಾಲಯದ ಪ್ರಕರಣಗಳು, (ವಿಚ್ಛೇದನೆ ಹೊರತುಪಡಿಸಿ), ಚೆಕ್ ಅಮಾನ್ಯ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಭೂ ಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯೆ ಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು, ರಾಜಿಯಾಗಬಲ್ಲ ಸಿವಿಲ್ ಪ್ರಕರಣಗಳು, ಖಾಯಂ ಜನತಾ ನ್ಯಾಯಾಲಯದಲ್ಲಿನ ಪ್ರಕರಣಗಳು ಮುಂತಾದ ವಿಷಯಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈ ಬಾರಿ ವಿಶೇಷವಾಗಿ ಸಾರಿಗೆ ಮತ್ತು ರಸ್ತೆ ಸುರಕ್ಷಿತ ಇವರ ಪ್ರಸ್ತಾವನೆಯಲ್ಲಿ ರಾಜ್ಯಾದ್ಯಂತ ಸಂಚಾರಿ ಇ ಚಲನ್ನಲ್ಲಿ ದಾಖಲಾಗಿರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ. 51 ರಿಯಾಯಿತಿ ನೀಡುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ನ್ಯಾಯಾಲಯದಲ್ಲಿಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.
ಅದಾಲತ್ ಕಾರ್ಯಕ್ರಮದಲ್ಲಿ ನ್ಯಾಯಾಲಯಗಳಲ್ಲಿ ಉಭಯ ಪಕ್ಷಕಾರರು ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ಮಾಡಲಾಗುವುದು. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ಬಾಂಧವ್ಯ ಉಳಿದು ವಿವಾದ ತೀರ್ಮಾನವಾಗುತ್ತದೆ. ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು.
ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕೆ ಇದೊಂದು ವಿಶೇಷ ಅವಕಾಶವಾಗಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳುವಂತೆ ಕೇಳಿಕೊಂಡರು. ಸಭೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಮಂಜುನಾಥ್, ಬೆಳ್ಳಾರೆ ಪೊಲೀಸ್ ಠಾಣಾ ನಿರೀಕ್ಷಕ ಸುಹಾಸ್, ಸುಳ್ಯ ಪೊಲೀಸ್ ಠಾಣಾ ಎಎಸ್ಐ ಗಿರಿಯಪ್ಪ ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.