ನ್ಯೂಸ್ ನಾಟೌಟ್ : ಕೆಎಸ್ಆರ್ಟಿಸಿ ಬಸ್ ನಿರ್ವಾಹಕಿಗೆ ಪ್ರಯಾಣಿಕನೋರ್ವ ಬಸ್ಸಿನಲ್ಲಿ ಹಲ್ಲೆ ಮಾಡಿದ ಘಟನೆ ಪುತ್ತೂರಿನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಮಂಗಳೂರು – ಪುತ್ತೂರುಕೆಎಸ್ಆರ್ಟಿಸಿ ಬಸ್ನಲ್ಲಿ ಕರ್ತವ್ಯ ನಿರತರಾಗಿದ್ದ ವಿಜಯ ಎಂಬವರಿಗೆ ಅದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಹಸನ್ ಎಂಬಾತ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಬಸ್ನಲ್ಲಿದ್ದ ವಿಕಲಾಂಗ ಪ್ರಯಾಣಿಕರೋರ್ವರಿಗೆ ಸೀಟು ಬಿಟ್ಟು ಕೊಡುವಂತೆ ಕೇಳಿದಾಗ ಆಕ್ಷೇಪಿಸಿದ ಹಸನ್ ಗಲಾಟೆ ನಡೆಸಿದ್ದಾನೆ. ಈ ವೇಳೆ ಆತ ಪ್ರಯಾಣಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಗಲಾಟೆಯ ಧ್ವನಿ ಕೇಳಿ ಡ್ರೈವರ್ ಬಸ್ ನಿಲ್ಲಿಸಿದಾಗ ನಿರ್ವಾಹಕಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಘಟನೆಯಲ್ಲಿ ಕೆಎಸ್ಆರ್ಟಿಸಿ ಬಸ್ ನಿರ್ವಾಹಕಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ. ಈ ಘಟನೆಯ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದು, ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.