ಬೆಳ್ತಂಗಡಿ: ಕಳೆದ ಹಲವು ವರ್ಷಗಳಿಂದ ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ಏರುವ ಮೂಲಕ ಪ್ರವಾಸಿಗರಿಗೆ ತನ್ನ ಸಾಹಸ ಪ್ರದರ್ಶನ ನೀಡುತ್ತಿರುವ ಚಿತ್ರದುರ್ಗದ ವಿಭಿನ್ನ ಪ್ರತಿಭೆ, ಹಲವಾರು ಪ್ರಶಸ್ತಿಗಳನ್ನು ಪಡೆದ ಜ್ಯೋತಿರಾಜ್ ಅಲಿಯಾಸ್ (ಕೋತಿರಾಜ್ )ದಕ್ಷಿಣಕನ್ನಡ ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದು, ಫೆ.12ರಂದು ಬೆಳ್ತಂಗಡಿಯ ಗಡಾಯಿಕಲ್ಲು (ನರಸಿಂಹ ಗಡ) ಏರಿ ಸಾಹಸ ಪ್ರದರ್ಶಿಸಲಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪ್ರವಾಸಿ ತಾಣ 1700 ಅಡಿ ಎತ್ತರವಿರುವ ಗಡಾಯಿಕಲ್ಲು(ನರಸಿಂಹಗಡ) ನ್ನು ಏರುವ ಸಾಹಸಕ್ಕೆ ಜ್ಯೋತಿರಾಜ್ ಹಾಗೂ ಅವರ ಎಂಟು ಮಂದಿಯ ತಂಡ ಬೆಳ್ತಂಗಡಿಗೆ ಆಗಮಿಸಿದ್ದು, ಶುಕ್ರವಾರದಿಂದಲೇ ಗಡಾಯಿಕಲ್ಲು ಏರಲು ಬೇಕಾದ ಸಕಲ ಸಿದ್ಧತೆಗಳನ್ನು ಮಾಡುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿದ ಜ್ಯೋತಿರಾಜ್ ಅಲಿಯಾಸ್ (ಕೋತಿರಾಜ್) ವನ್ಯಜೀವಿ ಅರಣ್ಯ ವಿಭಾಗದಿಂದ ಅನುಮತಿ ಪಡೆಯಲಾಗಿದ್ದು,ಸುರಕ್ಷತೆ ದೃಷ್ಟಿಯಿಂದ ಸೊಂಟಕ್ಕೆ ರೋಪ್ ಅಳವಡಿಸಿಕೊಳ್ಳಲಾಗುವುದು. ಆದರೂ ಕೈಗಳ ಸಹಾಯದಿಂದಲೇ ಗಡಾಯಿಕಲ್ಲು ಏರಲಿದ್ದೇನೆ ಎಂದಿದ್ದಾರೆ ಕೋತಿರಾಜ್. ತಂಡದಲ್ಲಿ ಚಿತ್ರದುರ್ಗ ಮೂಲದವರಾದ ನವೀನ್, ನಿಂಗರಾಜು, ಅಭಿ, ಪವನ್, ಜೋಶ್, ಬಸವರಾಜು, ಮದನ್ ಇದ್ದಾರೆ.