ನ್ಯೂಸ್ ನಾಟೌಟ್: ವಿರಾಜಪೇಟೆ ಅಮ್ಮತಿ ಕಾವಾಡಿ ಗ್ರಾಮದ ತಿರುವು ಒಂದರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಕಂದಕಕ್ಕೆ ಉರುಳಿದೆ. ಹಾಸನ ಜಿಲ್ಲೆ ಡಿಫ್ಫೋ ವ್ಯಾಪ್ತಿಯ ಸರ್ಕಾರಿ ಬಸ್ಸು ಸಂಖ್ಯೆ ಕೆಎ-೧೩ಎಫ್-೨೩೪೭ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ.
ಘಟನೆಯ ವಿವರ:
ಸರ್ಕಾರಿ ಬಸ್ಸು ಕೇರಳ ರಾಜ್ಯದ ಎರ್ನಾಕುಲಂ ನಿಂದ ವಿರಾಜಪೇಟೆ ಮಾರ್ಗವಾಗಿ ಹಾಸನಕ್ಕೆ ತೆರಳುತಿದ್ದು, ಇಂದು ಮುಂಜಾನೆ ಸುಮಾರು ನಾಲ್ಕರ ಸಮಯದಲ್ಲಿ ವಿರಾಜಪೇಟೆ ಸರ್ಕಾರಿ ಬಸ್ಸು ನಿಲ್ದಾಣದಿಂದ ತೆರಳಿದೆ. 4.20 ರ ಸಮಯದಲ್ಲಿ ಕಾವಾಡಿ ಗ್ರಾಮದ ಕಂದಕಕ್ಕೆ ಮಗುಚಿಕೊಂಡಿದೆ. ರಸ್ತೆಯಲ್ಲಿ ದಟ್ಟ ಮಂಜು ಇದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ ಎನ್ನಲಾಗಿದೆ.ಬಸ್ಸಿನಲ್ಲಿ ಸುಮಾರು ೪೦ ಮಂದಿ ಪ್ರಯಾಣಿಕರು ಇದ್ದರು ಎಂದು ತಿಳಿದು ಬಂದಿದೆ. ಅವಘಡ ದಿಂದ ಪ್ರಯಾಣಿಕರು ಸೇರಿದಂತೆ ಬಸ್ಸು ಚಾಲಕ ಮತ್ತು ನಿರ್ವಾಹಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಗಾಯಳುಗಳನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.