ನ್ಯೂಸ್ ನಾಟೌಟ್ : ಕಡಬದ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ನರಹಂತಕ ಕಾಡಾನೆ ದಾಳಿಗೆ ಇಬ್ಬರು ಪ್ರಾಣ ಕಳೆದುಕೊಂಡಿದ್ದ ವಿಷಯ ಎಲ್ಲೆಡೆ ಸುದ್ದಿಯಾಗಿದೆ. ಅದರಲ್ಲಿ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಮೃತ ರಮೇಶ್ ರೈ ( 55 ) ಅವರ ಸಾಕು ನಾಯಿ ಅವರ ಸಮಾಧಿಯ ಬಳಿ ಅವರಿಗಾಗಿ ಕಾಯುತ್ತಿರುವ ದೃಶ್ಯ ಈಗ ಎಲ್ಲರ ಗಮನ ಸೆಳೆದಿದೆ.
ಫೆ. 20 ರಂದು ಆನೆ ದಾಳಿಯಿಂದ ಯುವತಿ ರಂಜಿತಾಳನ್ನು ರಕ್ಷಣೆ ಮಾಡಲು ಹೋಗಿ ಆನೆ ದಾಳಿಗೆ ರಮೇಶ್ ಕೂಡ ಬಲಿಯಾಗಿದ್ದರು. ಇವರಿಗೆ ತಂದೆ ತಾಯಿ, ಅಣ್ಣ-ತಮ್ಮ , ಅಕ್ಕ-ತಂಗಿ ಯಾರೂ ಕೂಡಾ ಇರಲಿಲ್ಲ. 55 ವರ್ಷ ವಯಸ್ಸಾದರೂ ಮದುವೆಯಾಗದೆ ಒಬ್ಬಂಟಿ ಜೀವನ ನಡೆಸುತ್ತಿದ್ದರು.
ಜೀವನಕ್ಕೆ ಒಂದಿಷ್ಟು ರಬ್ಬರ್ ಕೃಷಿ, ಅಡಿಕೆ ತೋಟ ಮಾಡಿದ್ದರು, ಅವು ಮೃತ ರಮೇಶ್ ಅವರ ಹೆಸರಲ್ಲಿತ್ತು. ಅದನ್ನು ಹೊರತುಪಡಿಸಿ ಸ್ವಂತ ಜೀವ ಎಂದು ಹೇಳಿಕೊಳ್ಳಲು ಅವರ ಬಳಿ ಶ್ವಾನ ಮಾತ್ರ ಉಳಿದಿತ್ತು.
ಆದರೆ ತನ್ನ ಮನೆಯೊಡೆಯ ಆನೆ ದಾಳಿಯಿಂದ ಮೃತಪಟ್ಟ ಬಳಿಕ ರಮೇಶ್ ರೈ ಅವರ ಸಮಾಧಿಯ ಮುಂದೆ ಶ್ವಾನವು ರೋಧಿಸುತ್ತಿರುವ ದೃಶ್ಯ ಮನಕಲಕುವಂತಿದೆ.