ನ್ಯೂಸ್ ನಾಟೌಟ್: ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ದೇವಿಸಿಂಗ್ ಶೇಖಾವತ್ ಅವರು ಹೃದಯಾಘಾತದಿಂದ ಕೆಇಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದು ಇವರಿಗೆ 88 ವರ್ಷ ವಯಸ್ಸಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಶೇಖಾವತ್ ಫೆಬ್ರವರಿ 12 ರಂದು ಪುಣೆಯ ತಮ್ಮ ಮನೆಯ ಹೊರಗೆ ಕುಸಿದು ಬಿದ್ದಿದ್ದರು ಎನ್ನಲಾಗಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಅವರು ಅಧಿಕ ರಕ್ತದೊತ್ತಡ, ಮೂತ್ರಪಿಂಡ ವೈಫಲ್ಯ ಸೇರಿದಂತೆ ಇತರ ಸಮಸ್ಯೆಗಳಿಂದ ಬಳಲುತ್ತಿದ್ದರು. ಇದೇ ಅವರ ಸಾವಿಗೆ ಕಾರಣ ಎನ್ನಲಾಗಿದೆ.
ಶೇಖಾವತ್ ಅವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ 7 ಗಂಟೆಗೆ ವೈಕುಂಠಧಾಮ್ ಸ್ಮಶಾನದಲ್ಲಿ ನೆರವೇರಿಸಲಾಗುತ್ತದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದೇವಿಸಿಂಗ್ ಶೇಖಾವತ್ ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮಗ ರಾಜೇಂದ್ರ ಸಿಂಗ್ ಶೇಖಾವತ್, ಪುತ್ರಿ ಜ್ಯೋತಿ ರಾಥೋಡ್ ಅವರನ್ನು ಅಗಲಿದ್ದಾರೆ. ಇವರು ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಹಲವಾರು ರಾಜಕೀಯ ನಾಯಕರು , ಗಣ್ಯ ವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ.