ನ್ಯೂಸ್ ನಾಟೌಟ್ : ಬೆಳ್ಮ ದೇರಳಕಟ್ಟೆ ನಿವಾಸಿ ಮೊಹಮ್ಮದ್ ಶಲೀಲ್ ಎಂಬ ಯುವಕ ವಿಶ್ವದಲ್ಲಿ ಇಬ್ಬರ ದಾಖಲೆ ಮುರಿದು ಇದೀಗ ತಾನು ಗಿನ್ನಿಸ್ ದಾಖಲೆ ಸಾಧಿಸಿದ್ದಾರೆ.ಕೇವಲ ಮೂವತ್ತು ಸೆಕೆಂಡುಗಳಲ್ಲಿ ಫುಟ್ಬಾಲ್ನೊಂದಿಗೆ ಕಾಲುಗಳ ನಡುವೆ ೧೦ ಬಾರಿ ೮ ಆಕಾರದಲ್ಲಿ ಬಾಲ್ ಪಾಸ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಇಬ್ಬರ ದಾಖಲೆಗಳನ್ನು ಮುರಿದು ಮಹಮ್ಮದ್ ಶಲೀಲ್ ದಾಖಲೆ ಬರೆದಿದ್ದು ವಿಶೇಷ.೨೦೧೭ರಲ್ಲಿ ಇಂಗ್ಲೆಂಡ್ನ ಡೆಲೆ ಅಲ್ಲಿ ಅನ್ನುವ ವ್ಯಕ್ತಿ ೩೦ ಸೆಕೆಂಡುಗಳಲ್ಲಿ ೭ ಸುತ್ತುಗಳನ್ನು ಸಾಧಿಸುವ ಮೂಲಕ ಮೊದಲ ಗಿನ್ನಿಸ್ ದಾಖಲೆ ಸಾಧಿಸಿದ್ದರು. ಅದಾದ ಬಳಿಕ ೨೦೨೧ ರ ಫೆಬ್ರವರಿಯಲ್ಲಿ ಮಹಿಳಾ ಪುಟ್ಬಾಲ್ ಆಟಗಾರ್ತಿ ಅಮೆರಿಕ ಕ್ಯಾಲಿಫೋರ್ನಿಯಾದ ವೆಸ್ಟ್ ಲೇಕ್ನ ತಾಷಾ ನಿಕೋಲ್ ತೇರಾನಿ ಒಂದು ನಿಮಿಷದಲ್ಲಿ ೧೮ ಸುತ್ತುಗಳನ್ನು ಹೊಡೆಯುವ ಮೂಲಕ ಗಿನ್ನಿಸ್ ದಾಖಲೆ ಸಾಧಿಸಿ ಪುಸ್ತಕದ ಪುಟಗಳಲ್ಲಿ ಸೇರಿದ್ದರು. ಇದೀಗ ಅವರಿಬ್ಬರ ದಾಖಲೆಗಳನ್ನು ಮುರಿದು ಮಹಮ್ಮದ್ ಶಲೀಲ್ ದಾಖಲೆ ಬರೆದಿದ್ದು ಕರುನಾಡಿಗೆ ಕೀರ್ತಿ ತಂದಿದ್ದಾರೆ.
ಬೆಳ್ಮ ದೇರಳಕಟ್ಟೆ ನಿವಾಸಿ ಆರ್.ಬಿ ಅಬ್ದುಲ್ ಹಮೀದ್ ಮತ್ತು ಮುಮ್ತಾಝ್ ದಂಪತಿ ಪುತ್ರ ಮೊಹಮ್ಮದ್ ಶಲೀಲ್ ಈ ದಾಖಲೆ ನಿರ್ಮಿಸಿದ್ದಾರೆ. ಕೂಳೂರು ಯೆನೆಪೋಯ ಸಂಸ್ಥೆಯಲ್ಲಿ ಏವಿಯೇಷನ್ ಆಂಡ್ ಲಾಜಿಸ್ಟಿಕ್ಸ್ ಕಾಲೇಜಿನ ಅಂತಿಮ ವಿದ್ಯಾರ್ಥಿಯಾಗಿರುವ ಶಲೀಲ್ ಹವ್ಯಾಸಿ ಫುಟ್ಬಾಲ್ ಆಟಗಾರ. ಒಂದು ತಿಂಗಳ ಹಿಂದೆ ಆನ್ಲೈನ್ ಮೂಲಕ ಗಿನ್ನಿಸ್ ದಾಖಲೆ ಸಾಧಿಸಲು ಅರ್ಜಿಯನ್ನು ಹಾಕಿದ್ದು,ಅದು ಅವರ ಕೈ ಹಿಡಿದಿದೆ.