ನ್ಯೂಸ್ ನಾಟೌಟ್: ದೇಶ ಶಾಂತಿಯಿಂದ ನೆಲೆಸಬೇಕು. ಮಕ್ಕಳು ಗುರು- ಹಿರಿಯರಿಗೆ ಗೌರವ ನೀಡಬೇಕು, ಜಾತಿ- ಬೇಧ ಮರೆತು ಎಲ್ಲರೂ ಸೌಹಾರ್ದತೆಯಿಂದ ಬದುಕಬೇಕು ಹಾಗೂ ಶುದ್ಧ ನೆಲ, ಶುದ್ಧ ವಾಯು ನಮ್ಮದಾಗಬೇಕು ಎಂಬ ಸಂದೇಶದೊಂದಿಗೆ ರೈತನೊಬ್ಬ ರಾಯಚೂರಿನಿಂದ ಸೈಕಲ್ನಲ್ಲೇ 13ಕ್ಕೂ ಹೆಚ್ಚು ರಾಜ್ಯವನ್ನು ಸುತ್ತಿ ಕೊನೆಗೆ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರಿನ 55 ವಯಸ್ಸಿನ ವಿಜಯ್ ಗೋಪಾಲಕೃಷ್ಣ ಎಂಬ ರೈತ ಸೈಕಲ್ ಮುಂಭಾಗದಲ್ಲಿ ದೊಡ್ಡ ಕೇಸರಿ ಧ್ವಜವನ್ನು ಕಟ್ಟಿ ಕಳೆದ 2022 ಮಾರ್ಚ್ 11ರಂದು ತನ್ನ ಸೈಕಲ್ ಏರಿ ದೇಶ ಪರ್ಯಟನೆ ಆರಂಬಿಸಿದ್ದರು. ತನ್ನ ಯಾತ್ರೆಯನ್ನು ರಾಯಚೂರಿನಿಂದ ಪ್ರಾರಂಭಿಸಿ ಕಾಶಿ, ರಾಮೇಶ್ವರ, ಕರ್ನಾಟಕ, ತೆಲಂಗಾಣ, ಗುಜರಾತ್, ಅಯೋಧ್ಯೆ, ಉತ್ತರಪ್ರದೇಶ, ಮಥುರಾ, ಆಗ್ರ, ಹರಿಯಾಣ, ದೆಹಲಿ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಕೇರಳ ಮೊದಲಾದ ರಾಜ್ಯದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಕೊನೆಗೆ ಉಡುಪಿ, ಕಾರವಾರ, ಮತ್ತೆ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದಿದ್ದಾರೆ. ಅಲ್ಲದೆ ಪುಣ್ಯ ನದಿಗಳಾದ ಗಂಗಾ, ಯಮುನಾ, ಸರಸ್ವತಿ ಸಹಿತ 12 ಪ್ರಮುಖ ನದಿಗಳನ್ನು ಸಂದರ್ಶಿಸಿದ್ದು, ಒಟ್ಟು 22,000 ಕಿ.ಮೀ. ಸೈಕಲ್ನಲ್ಲೇ ಸುತ್ತಾಡಿದ್ದಾರೆ.
ಅವಿವಾಹಿತರಾಗಿರುವ ವಿಜಯ್ ಗೋಪಾಲಕೃಷ್ಣ ಅವರಿಗೆ ವ್ಯವಸಾಯವೇ ಜೀವನಾಧಾರವಾಗಿದೆ. ಇವರು ತನ್ನ ಸಂದೇಶದಲ್ಲಿ ಭಾರತ ಸುಭದ್ರ ರಾಷ್ಟ್ರವಾಗಬೇಕು. ದೇಶದಲ್ಲಿ ಅನಾಚಾರ, ದುಷ್ಕೃತ್ಯ, ಜಾತಿ ನಿಂದನೆ, ಮೇಲು-ಕೀಳು ಮಾಡದೆ, ಎಲ್ಲರೂ ಭಾರತದ ಮಕ್ಕಳು ಎಲ್ಲರೂ ಒಟ್ಟಾಗಿ ದೇಶಕ್ಕಾಗಿ ಏನಾದರೂ ಒಂದು ಕೊಡುಗೆ ನೀಡುಬೇಕು ಎಂದು ಈ ಯಾತ್ರೆಯ ಸಂದೇಶವಾಗಿದೆ ಎಂದಿದ್ದಾರೆ.