ನ್ಯೂಸ್ನಾಟೌಟ್: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಸಮೀಪ ಫೆ.20ರಂದು ಬೆಳಗ್ಗೆ ಆನೆ ದಾಳಿಯಿಂದ ಇಬ್ಬರು ಮೃತಪಟ್ಟ ಬಳಿಕ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಕಾಡಾನೆ ಸೆರೆ ಹಿಡಿಯಲು ಆರಂಭಿಸಿದ ಆಫರೇಷನ್ ಎಲಿಫೆಂಟ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎನ್ನಲಾಗಿದೆ. ಇದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಇಬ್ಬರನ್ನು ಬಲಿ ಪಡೆದ ನರಹಂತಕ ಕಾಡಾನೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರಿಂದ ಭಾರಿ ಒತ್ತಡ ಬಂದಿತ್ತು. ಈ ಹಿನ್ನೆಲೆಯಲ್ಲಿ ನಾಗರಹೊಳೆ ಮತ್ತು ದುಬಾರೆ ಸಾಕಾನೆ ಶಿಬಿರದಿಂದ ಕಾಡಾನೆ ಸೆರೆ ಹಿಡಿಯುವುದರಲ್ಲಿ ಪಳಗಿರುವ ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್ ಹಾಗೂ ಮಹೇಂದ್ರ ಎಂಬ ಸಾಕಾನೆಗಳು ಕರೆತಂದು ಕಾರ್ಯಾಚರಣೆ ಆರಂಭಿಸಲಾಗಿತ್ತು.
ಮೂರು ದಿನಗಳ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಡ್ರೋನ್ ಬಳಸಿ ಕಾಡಾನೆಯ ಚಲನವಲನಗಳನ್ನು ಪತ್ತೆ ಹಚ್ಚಿ ಫೆ.23ರಂದು ಮಂಡೆಕರ ಬಳಿಯ ಅರಣ್ಯ ಪ್ರದೇಶದಲ್ಲಿ ಒಂದು ಕಾಡಾನೆಯನ್ನು ಸೆರೆ ಹಿಡಿದು ಎರಡು ಸಾಕಾನೆಗಳ ಜತೆ ನಾಗರಹೊಳೆ ಮತ್ತಿಗೋಡು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ಉಳಿದ ಮೂರು ಆನೆಗಳು ನೆಟ್ಟಣದ ಅರಣ್ಯ ಇಲಾಖೆಯ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿತ್ತು. ಆದರೆ ಭಾನುವಾರ (ಫೆ.26 ರಂದು) ರಾತ್ರಿ ನೆಟ್ಟಣದಲ್ಲಿದ್ದ ಮೂರು ಸಾಕಾನೆಗಳನ್ನೂ ಕೊಂಡೊಯ್ಯಲಾಗಿದೆ. ಇದಕ್ಕೆ ಗ್ರಾಮಸ್ಥರು ಅಪಸ್ವರ ಎತ್ತಿದ್ದಾರೆ. ಅರಣ್ಯ ಅಧಿಕಾರಿಗಳು ಅವಘಡ ಸಂಭವಿಸಿದ ಬಳಿಕ ಬಂದು ಒಂದು ಕಾಡಾನೆಯನ್ನು ಹಿಡಿದು ಹೋಗಿದ್ದಾರೆ. ಮುಂದೆ ಕಾಡಾನೆ ಉಪಟಳ ಆರಂಭಿಸಿದರೆ ಏನು ಮಾಡುವುದು ಎನ್ನುವುದು ಇಲ್ಲಿಯ ಗ್ರಾಮಸ್ಥರ ಅಳಲು.
ಕಡಬ ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಹಗಲು ಗಸ್ತು ತಿರುಗುತ್ತಿದ್ದಾರೆ. ಆನೆ ಇರುವ ಬಗ್ಗೆ ಗ್ರಾಮಸ್ಥರಿಂದ ಯಾವುದೇ ದೂರು ಬಂದಿಲ್ಲ. ಅಲ್ಲದೇ ಕೊಡಗಿನಲ್ಲಿ ಆಪರೇಶನ್ ಟೈಗರ್ ಕಾರ್ಯಾಚರಣೆ ಆರಂಭಿಸಿದ್ದು, ಅದಕ್ಕಾಗಿ ಕಾರ್ಯಾಚರಣೆಗೆ ತಂದಿದ್ದ ಆನೆಗಳನ್ನು ಅಲ್ಲಿಗೆ ಕರೆದೊಯ್ಯಲಾಗಿದೆ ಎಂದು ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.
ಪುಂಡಾಟ ಮೆರೆದ ಕಾಡಾನೆಯನ್ನು ಫೆ.23ರಂದು ಸೆರೆ ಹಿಡಿದು ನಾಗರಹೊಳೆಗೆ ಸ್ಥಳಾಂತರಿಸುವ ಸಂದರ್ಭವೂ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಆಕ್ರೋಶಿತ ಜನರ ಮಧ್ಯೆ ಮಾತಿನ ಚಕಾಮಕಿ ನಡೆದಿತ್ತು. ಉಪಟಳ ನೀಡುತ್ತಿದ್ದ ಇತರ ಕಾಡಾನೆಗಳನ್ನೂ ಸೆರೆ ಹಿಡಿದು ಬಳಿಕವೇ ಕೊಂಡೊಯ್ಯುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದರು. ಈ ಸಂದರ್ಭ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಅರಣ್ಯ ಇಲಾಖೆಯ ಜೀಪನ್ನು ಆಕ್ರೋಶಿತ ಜನರು ಜಖಂಗೊಳಿಸಿದ್ದರು. ಅಲ್ಲದೇ ಅಧಿಕಾರಗಳ ಮೇಲೂ ಕಲ್ಲು ತೂರಾಟ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿ ಏಳು ಮಂದಿಯನ್ನು ಬಂಧಿಸಲಾಗಿತ್ತು.