ನ್ಯೂಸ್ ನಾಟೌಟ್: ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ಮಹಿಳೆಯರ ಆರ್ಥಿಕ ಬಲವರ್ಧನೆಗಾಗಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ವ್ಯಾಪಾರ ಮೇಳ ಆಯೋಜಿಸಿದ್ದು, ಸುಮಾರು 50ಕ್ಕೂ ಹೆಚ್ಚು ಮಳಿಗೆಗಳಲ್ಲಿ ಮಹಿಳೆಯರೇ ವ್ಯಾಪಾರದಲ್ಲಿ ತೊಡಗಿ ಗಮನ ಸೆಳೆದರು.
ಪ್ರತಿ ನಿತ್ಯ ಮನೆಕೆಲಸದಲ್ಲೇ ನಿರತರಾಗುತ್ತಿದ್ದ ಮಹಿಳೆಯರು ವ್ಯಾಪಾರ ಮೇಳದಲ್ಲಿ ಸ್ಟಾಲ್ ಹಾಕಿ ವ್ಯಾಪಾರಕ್ಕೆ ಇಳಿದು ಬಿಟ್ಟಿದ್ರು. ಮನೆಯಲ್ಲೇ ವಿಧವಿಧವಾದ ತಿಂಡಿಗಳನ್ನು ತಯಾರಿಸಿ ತಂದು ವ್ಯಾಪಾರದಲ್ಲಿ ತೊಡಗಿದ್ದರು. ಸಂಜೀವಿನಿ ಕೆಎಸ್ಆರ್ಎಲ್ಪಿಎಸ್ ಸಂಸ್ಥೆಯ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಎನ್ಆರ್ಎಲ್ಎಂ ಯೋಜನೆಯಡಿ ಗ್ರಾಮೀಣ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಬಲವರ್ಧನೆಗಾಗಿ ಸಂಜೀವಿನಿ ಸ್ವ ಸಹಾಯ ಸಂಘಗಳ ಮಹಿಳಾ ಉದ್ಯಮಿಗಳು ತಯಾರಿಸುವ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್ ಮಾತನಾಡಿ, ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಹಿಳೆಯರಿಂದ ಮೇಳಕ್ಕೆ ಉತ್ತಮ ಪ್ರಶಂಸೆ ಸಿಕ್ಕಿದೆ. ಈ ರೀತಿ ಕಾರ್ಯಕ್ರಮಗಳಿಂದ ಮಹಿಳೆಯರು ಮನೆಯಲ್ಲೇ ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರೆಯಲು ಸಹಕಾರಿಯಾಗುತ್ತದೆ ಎಂದರು.
ಕೊಡಗಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಮಹಿಳೆಯರು ತಾವು ಬೆಳೆದ ವಸ್ತುಗಳನ್ನೂ ಹಾಗೂ ಕರಕುಶಲ ವಸ್ತುಗಳನ್ನು ಮಾರಾಟ ಮಾಡಿದ್ದರು. ಮೇಳದಲ್ಲಿ ತಾವೇ ತಯಾರಿಸಿದ ವಿವಿಧ ಆಹಾರ ಪದಾರ್ಥಗಳಾದ ಚಕ್ಕುಲಿ, ಕೋಡುಬಳೆ, ಮಸಾಲ ಹುಡಿಗಳು, ಚಾಕೊಲೆಟ್, ವೈನ್, ಹಣ್ಣು ತರಕಾರಿಗಳು, ಬಗೆ ಬಗೆಯ ಸೊಪ್ಪುಗಳು, ಉಲ್ಲನ್ ಕ್ಯಾಪ್, ಬ್ಯಾಗ್, ಹೀಗೆ ಹತ್ತಾರು ವಿಧದ ವಸ್ತುಗಳನ್ನು ಮೇಳದಲ್ಲಿ ಗಮನ ಸೆಳೆದಿತ್ತು. ಗ್ರಾಹಕರು ಮುಂಜಾನೆಯಿಂದಲೇ ಬಂದು ವಸ್ತುಗಳನ್ನು ಖರೀದಿಸುವಲ್ಲಿ ತೊಡಗಿದ್ದರು.