ನ್ಯೂಸ್ ನಾಟೌಟ್ : ಕೊಡಗಿನಲ್ಲಿ ಆನೆ ಮತ್ತು ಮಾನವ ಸಂಘರ್ಷ ಮಿತಿಮೀರಿದೆ. ಕಾಡಾನೆಗಳ ಹಾವಳಿಯಿಂದ ಜನರು ಆತಂಕದಲ್ಲೇ ಕಾಲ ಕಳೆಯುವ ಪರಿಸ್ಥಿತಿ ಬಂದೊದಗಿದೆ.ಕಾಡಾನೆ ಕಾಟ ತಪ್ಪಿಸುವಂತೆ ಆಗ್ರಹಿಸಿ ಮಡಿಕೇರಿಯಲ್ಲಿ ಸಾವಿರಾರು ರೈತರು, ಕಾರ್ಮಿಕರು ತೀವ್ರ ಹೋರಾಟ ನಡೆಸಿದ ಘಟನೆಯೂ ನಡೆದಿತ್ತು.ಅದರ ಬೆನ್ನಲ್ಲೇ ರೈತರು,ಕಾರ್ಮಿಕರು ಆನೆ ದಾಳಿಗೆ ಬಲಿಯಾಗುತ್ತಿದ್ದಾರೆ.
ಕೊಡಗಿನ ಶನಿವಾರಸಂತೆ ಶಾಂತಪುರದ ಹೇಮಾವತಿ ಹಿನ್ನೀರಿನ ಬಳಿ ಆನೆ ದಾಳಿಗೆ ಕೃಷಿ ಕಾರ್ಮಿಕ ಕುಮಾರ (40) ಎಂಬವರು ಬಲಿಯಾಗಿದ್ದಾರೆ.ಹೇಮಾವತಿ ಅಣೆಕಟ್ಟೆಯ ಹಿನ್ನೀರಿನ ಖಾಲಿ ಪ್ರದೇಶದಲ್ಲಿ ಭತ್ತ ನಾಟಿ ಮಾಡುತ್ತಿದ್ದ ಕುಮಾರ ಹಾಗೂ ದೊಡ್ಡಯ್ಯ ಅವರ ಮೇಲೆ ಕರಿಕಡ್ಡಿ ಕಾಡಿನಿಂದ ಬಂದ ಆನೆ ದಾಳಿ ನಡೆಸಿದೆ. ದೊಡ್ಡಯ್ಯ ಓಡಿ ಹೋಗಿ ಪಾರಾಗಿದ್ದಾರೆ.ಕುಮಾರ ಆನೆ ದಾಳಿಗೆ ಸಿಲುಕಿ ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದ್ದಾರೆ.
ಹೇಮಾವತಿ ಅಣೆಕಟ್ಟೆಯಲ್ಲಿ ನೀರು ಕಡಿಮೆ ಆಗುತ್ತಿದ್ದಂತೆ, ಹಿನ್ನೀರಿನಲ್ಲಿ ಕೃಷಿ ಚಟುವಟಿಕೆಗಳನ್ನು ರೈತರು ಆರಂಭಿಸುತ್ತಾರೆ. ಸಮೀಪದಲ್ಲೇ ಅರಣ್ಯ ಇರುವುದರಿಂದ ಕಾಡಾನೆಗಳು ನೀರು ಕುಡಿಯಲೆಂದು ಆಗಾಗ ಇಲ್ಲಿಗೆ ಬರುತ್ತವೆ.ಇದರಿಂದ ರೈತರು ತೀರಾ ಸಂಕಷ್ಟ ಎದುರಿಸುತ್ತಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.