- ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಆತಂಕ
ನ್ಯೂಸ್ ನಾಟೌಟ್: ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಆತಂಕ ಎದುರಾಗಿದ್ದು, ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳದಿದ್ದರೆ ಆಪತ್ತು ತಪ್ಪಿದ್ದಲ್ಲ. ಈ ವರ್ಷದ ಜನವರಿಯಿಂದ 427 ಮಂದಿಗೆ ಡೆಂಗ್ಯೂ ಸೋಂಕು ದೃಢಪಟ್ಟಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 275 ಪ್ರಕರಣ ಪತ್ತೆಯಾಗಿತ್ತು. ಈ ವರ್ಷ 7,000 ಕ್ಕೂ ಹೆಚ್ಚು ಶಂಕಿತ ಪ್ರಕರಣಗಳನ್ನು ಈಗಾಗಲೇ ಗುರುತಿಸಲಾಗಿದೆ. ಒಟ್ಟು ಶಂಕಿತ ಪ್ರಕರಣಗಳಲ್ಲಿ 4,738 ವ್ಯಕ್ತಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1,140 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 181 ಪ್ರಕರಣಗಳು ದೃಢಪಟ್ಟಿದೆ.
ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ತಲಾ 20 ಪ್ರಕರಣಗಳು ವರದಿಯಾಗಿದ್ದು, ಚಿತ್ರದುರ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ 17, ಬಾಗಲಕೋಟೆ ಮತ್ತು ಕೋಲಾರದಲ್ಲಿ ತಲಾ 13, ಮಂಡ್ಯದಲ್ಲಿ 12, ಕೊಪ್ಪಳ, ವಿಜಯನಗರ, ಧಾರವಾಡ ಮತ್ತು ಯಾದಗಿರಿಯಲ್ಲಿ ತಲಾ 11, ಹಾಸನದಲ್ಲಿ 10 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದೆ. ಇತರ ಜಿಲ್ಲೆಗಳು ತಲಾ 10ಕ್ಕಿಂತ ಕಡಿಮೆ ದೃಢಪಡಿಸಿದ ಪ್ರಕರಣಗಳನ್ನು ವರದಿ ಮಾಡಿವೆ.
ಡೆಂಗ್ಯೂ ಹರಡುವ ಸೊಳ್ಳೆ, ರೋಗ, ಲಕ್ಷಣ
ಡೆಂಗ್ಯೂ ರೋಗವು ಈಡಿಸ್ ಈಡಿಪ್ಟಿ ಎಂಬ ಹೆಣ್ಣು ಸೊಳ್ಳೆಯಿಂದ ಬರುತ್ತದೆ. ಡೆಂಗ್ಯೂ ಜ್ವರ ಉಂಟಾದ ತಕ್ಷಣದಲ್ಲಿ ಮಕ್ಕಳು ಅಥವಾ ದೊಡ್ಡವರು ಯಾವುದೇ ರೋಗ ಲಕ್ಷಣಗಳನ್ನು ಹೊಂದಿರುವುದಿಲ್ಲ. ರೋಗ ಲಕ್ಷಣಗಳು ನಾಲ್ಕರಿಂದ ಏಳು ದಿನಗಳ ನಂತರ ಕಾಣಿಸಿಕೊಳ್ಳುತ್ತದೆ. ಡೆಂಗ್ಯೂ ಜ್ವರ ಲಕ್ಷಣಗಳೆಂದರೆ ತಲೆನೋವು, ಮೈಕೈ ನೋವು, ಕೀಲು ನೋವು, ವಾಕರಿಕೆ, ಕಣ್ಣುಗಳ ಹಿಂಭಾಗದಲ್ಲಿ ನೋವು, ಊದಿಕೊಂಡ ಗ್ರಂಥಿಗಳು, ದೇಹದ ಮೇಲೆ ಅಲ್ಲಲ್ಲಿ ಕಲೆಗಳು ಕಾಣಿಸಿಕೊಳ್ಳತ್ತದೆ.
ಡೆಂಗ್ಯೂ ತಡೆಗೆ ಕ್ರಮ
ಸಾಧ್ಯವಾದಷ್ಟು ಮನೆ, ನಾವು ವಾಸಿಸುವ ಪರಿಸರಗಳಲ್ಲಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಮನೆಯ ವಠಾರದಲ್ಲಿ ಬಿಸಾಡಿದ ಪ್ಲಾಸ್ಟಿಕ್ ಡಬ್ಬ, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಬಿಸಾಡಿದ ಟಯರ್, ನಿರುಪಯುಕ್ತ ವಸ್ತುಗಳಲ್ಲಿ ನೀರು ಶೇಖರಣೆಗೊಂಡು ಸೊಳ್ಳೆ ಉತ್ಪತ್ತಿ ತಾಣವಾಗದಂತೆ ನೋಡಿಕೊಳ್ಳಬೇಕು. ಮನೆಯ ಬಾಗಿಲು, ಕಿಟಕಿಗಳನ್ನು ಮುಚ್ಚಿ ಸೊಳ್ಳೆ ನಿವಾರಕ ಪರದೆಗಳನ್ನು ಹಾಕಿಕೊಳ್ಳಬೇಕು.