ನ್ಯೂಸ್ ನಾಟೌಟ್ : ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನ ಸಂಭ್ರಮದ ಮಖೆ ಜಾತ್ರೆ ಆರಂಭಗೊಂಡಿದೆ.೩೪ ದಿನಗಳ ಕಾಲ ನಡೆಯುವ ಮಖೆ ಜಾತ್ರೆಗೆ ಊರೂ, ಹಳ್ಳಿಗಳಿಂದ ಬರುವ ಭಕ್ತಾದಿಗಳು ದೇವರಿಗೆ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ.
ದೇವಸ್ಥಾನಗಳಲ್ಲಿ ವರ್ಷಕ್ಕೊಮ್ಮೆ ಆಯನ, ರಥೋತ್ಸವ ಹೀಗೆ ಹಲವು ಹೆಸರಿನಲ್ಲಿ ಉತ್ಸವ ಜಾತ್ರೆ ನಡೆಯುವುದು ಸಾಮಾನ್ಯ. ಆದರೆ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಹಲವು ವೈಶಿಷ್ಟಗಳನ್ನೊಳಗೊಂಡಿದೆ. ಬೇರೆಡೆ ಒಂದೆರಡು ದಿನ ಜಾತ್ರೆ ನಡೆದರೆ, ಇಲ್ಲಿ ೩೪ ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಮಾತ್ರವಲ್ಲ ಮೂರು ಬಾರಿ ರಥೋತ್ಸವ ನಡೆಯುತ್ತದೆ. ಇದೇ ಇಲ್ಲಿನ ವಿಶೇಷತೆಗಳಲ್ಲಿ ಒಂದು. ಭಕ್ತಾದಿಗಳು ನೇತ್ರಾವತಿ,ಕುಮಾರಧಾರ ನದಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ದೇವರ ದರ್ಶನ ಪಡೆದು, ಬಲಿ ಉತ್ಸವದಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸುತ್ತಾರೆ.
ಫೆ. 18ರಂದು ಸೂರ್ಯೋದಯದಿಂದ ಸ್ವಯಂ ಲಿಂಗಾಭಿಷೇಕ. (ಭಕ್ತರು ತಮ್ಮ ಕೈಯಾರೆ ಉದ್ಭವ ಲಿಂಗಕ್ಕೆ ಅಭಿಷೇಕ ಮಾಡುವುದು). ಸಂಜೆ ಗಂಟೆ 7ರಿಂದ ಉದ್ಭವ ಲಿಂಗದ ಬಳಿ ಅಘ್ರ್ಯ, ಶಿವಪೂಜೆ, ಸೇವೆಗಳು, ರಾತ್ರಿ ಗಂಟೆ 7.45ರಿಂದ 9ರ ವರೆಗೆ ‘ರುದ್ರ ಪಾರಾಯಣ’ (ಉದ್ಭವ ಲಿಂಗದ ಬಳಿ), ರಾತ್ರಿ ಗಂಟೆ 8ರಿಂದ ಬಲಿ ಹೊರಟು ಉತ್ಸವ, ಮಹಾಪೂಜೆ ನಡೆಯಲಿದೆ.ಫೆ.25ರಂದು ಬೆಳಿಗ್ಗೆ ಉತ್ಸವ, ದೇವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಗಣಪತಿ ಹೋಮ, ಶತರುದ್ರಾಭಿಷೇಕ, ಸೀಯಾಳಾಭಿಷೇಕ, ಚಂಡಿಕಾ ಹೋಮ, ಅನ್ನಸಂತರ್ಪಣೆ ನಡೆಯಲಿದೆ. ಮಾರ್ಚ್ 6ರಂದು ಹುಣ್ಣಿಮೆ 2ನೇ ಮಖೆಕೂಟ, 14ರಂದು ಅಷ್ಟಮಿ 3ನೇ ಮಖೆಕೂಟ, 21ರಂದು ಮಹಾಕಾಳಿ ಮೆಚ್ಚಿ, 24ರಂದು ದೊಂಪದ ಬಲಿ ನೇಮೋತ್ಸವ ನಡೆಯಲಿದೆ.