ನ್ಯೂಸ್ ನಾಟೌಟ್ : ಕರ್ನಾಟಕದ ಹಾಸನ ಜಿಲ್ಲೆಯಲ್ಲಿ 20 ವರ್ಷದ ಯುವಕನೊಬ್ಬ ತನ್ನ ಮನೆಗೆ ಐಫೋನ್ ವಿತರಿಸಲು ಬಂದ ಇ-ಕಾರ್ಟ್ ಡೆಲಿವರಿ ಬಾಯ್ ಯನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯು ಮೃತದೇಹವನ್ನು 4 ದಿನಗಳ ಕಾಲ ತನ್ನ ಮನೆಯೊಳಗೆ ಶೇಖರಿಸಿಟ್ಟು ರೈಲ್ವೆ ನಿಲ್ದಾಣದ ಬಳಿ ಸುಟ್ಟು ಹಾಕಿದ್ದ ಘಟನೆ ವರದಿಯಾಗಿದೆ.
ಹಾಸನದ ಅರಿಸ್ಕೆರೆ ಪಟ್ಟಣದ ಹೇಮಂತ್ ದತ್ತ(೨೦) ಎಂದು ಗುರುತಿಸಲಾದ ಆರೋಪಿ, ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದ ಐಫೋನ್ಗೆ ಪಾವತಿಸಲು ಹಣವಿಲ್ಲದ ಕಾರಣ ಡೆಲಿವರಿ ಬಾಯ್ ಯನ್ನು ಮನೆಯೊಳಗೆ ಕರೆದು ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಫೆಬ್ರವರಿ 11 ರಂದು ಅಂಚೆಕೊಪ್ಪಲು ರೈಲ್ವೆ ನಿಲ್ದಾಣದ ಬಳಿ ಸುಟ್ಟ ಶವವೊಂದು ಪತ್ತೆಯಾಗಿದ್ದು, ನಂತರ ತನಿಖೆ ಆರಂಭಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ಇ-ಕಾರ್ಟ್ ಎಕ್ಸ್ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಮೃತ ಹೇಮಂತ್ ನಾಯ್ಕ್ ಫೆಬ್ರವರಿ 7 ರಂದು ಲಕ್ಷ್ಮೀಪುರ ಲೇಔಟ್ ಬಳಿ ಹೇಮಂತ್ ದತ್ತಾ ಬುಕ್ ಮಾಡಿದ್ದ ಸೆಕೆಂಡ್ ಹ್ಯಾಂಡ್ ಐಫೋನ್ ನೀಡಲು ಹೋಗಿದ್ದರು ಎಂದು ತನಿಖೆಯ ವೇಳೆ ತಿಳಿದುಬಂದಿದೆ.
ಡೆಲಿವರಿ ಬಾಯ್ ಫೋನ್ ನೀಡಿ 46,000 ರೂ.ಗೆ ಹಣ ಕೇಳಿದಾಗ, ಹೇಮಂತ್ ಅವರನ್ನು ಮನೆಯೊಳಗೆ ಕರೆದು ಚಾಕುವಿನಿಂದ ಇರಿದು ಕೊಂದಿದ್ದಾನೆ ಮತ್ತು ಶವವನ್ನು ವಿಲೇವಾರಿ ಮಾಡಲಾಗದೆ ನಾಲ್ಕು ದಿನಗಳ ಕಾಲ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಈ ಘಟನೆ ಅರಸೀಕೆರೆ ಪಟ್ಟಣದ ಜನರನ್ನು ಬೆಚ್ಚಿಬೀಳಿಸಿದೆ.
ಬಳಿಕ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಬೈಕ್ ನಲ್ಲಿ ತೆಗೆದುಕೊಂಡು ಹೋಗಿ ರೈಲು ನಿಲ್ದಾಣದ ಬಳಿ ಸುಟ್ಟು ಹಾಕಿದ್ದು, ಆರೋಪಿಯು ಶವವನ್ನು ಸುಡಲು ತೆರಳುತ್ತಿದ್ದಾಗ ಬೈಕ್ನಲ್ಲಿ ಶವವನ್ನು ಹೊತ್ತುಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪತ್ತೆಹಚ್ಚಿ ವ್ಯಕ್ತಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.